– ಉಪ ಮುಖ್ಯಮಂತ್ರಿ ಆಗಬೇಕೆಂಬ ಒತ್ತಾಯ ಇದೆ
ಶಿವಮೊಗ್ಗ: ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಜಗದೀಶ್ ಶೆಟ್ಟರ್ ರೀತಿಯಲ್ಲಿ ನಾನು ಸಚಿವ ಸ್ಥಾನ ಬೇಡ ಎಂದು ಹೇಳುವುದಿಲ್ಲ, ಜೊತೆಗೆ ಲಾಬಿಯನ್ನೂ ಮಾಡುವುದಿಲ್ಲ. ಪಕ್ಷ ಉಪ ಮುಖ್ಯಮಂತ್ರಿ ಆಗು ಅಂದ್ರೆ ಆಗ್ತೇನೆ, ಸಚಿವನಾಗು ಅಂದ್ರೆ ಸಚಿವನಾಗುತ್ತೇನೆ. ಶಾಸಕನಾಗಿರು ಅಂದ್ರೆ ಶಾಸಕನಾಗಿಯೇ ಇರುತ್ತೇನೆ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
Advertisement
ಶಿವಮೊಗ್ಗದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಅತಿರಥ ಮಹಾರಥರು ಇದ್ದರೂ ಪಕ್ಷ ನನ್ನನ್ನು ಗುರುತಿಸಿ ಈ ಹಿಂದೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿತ್ತು. ಈ ಬಾರಿಯೂ ನನಗಿಂತಲೂ ಹಿರಿಯರು, ಪ್ರವೀಣರು ಇದ್ದಾರೆ. ಆದರೆ ನಾನು ಉಪ ಮುಖ್ಯಮಂತ್ರಿ ಆಗಬೇಕು ಎಂದು ಹಲವು ಸಮಾಜದ ಮುಖಂಡರು, ಸ್ವಾಮೀಜಿಗಳು ಒತ್ತಡ ಹಾಕುತ್ತಿದ್ದಾರೆ. ಆದರೆ ಯಾರು ಸಹ ಈ ರೀತಿ ಒತ್ತಡ ಹಾಕಬೇಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶೆಟ್ಟರ್ ನನಗೆ ತುಂಬಾ ಆತ್ಮೀಯರು, ಅವರ ಬಳಿ ಮಾತಾಡ್ತೀನಿ: ಬೊಮ್ಮಾಯಿ
Advertisement
Advertisement
ನಮಗೆ ರಾಮನ ರೀತಿಯಲ್ಲಿ ರಾಜಕಾರಣ ಮಾಡಲು ಬರುತ್ತದೆ. ಕೃಷ್ಣನ ರೀತಿಯಲ್ಲಿ ತಂತ್ರಗಾರಿಕೆಯೂ ಇರುತ್ತದೆ. ಕಾಂಗ್ರೆಸ್ ವಿರುದ್ಧ ಈಗ ಕೃಷ್ಣನ ರೀತಿ ತಂತ್ರಗಾರಿಕೆ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ಈ ಸರ್ಕಾರವೇ ಇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವ್ಯಂಗ್ಯವಾಡಿದ್ದರು. ಈಗ ಎರಡು ವರ್ಷ ಅವರು ಏನಾದರೂ ಮಾತನಾಡಲಿ ನೋಡೋಣ ಎಂದರು.
Advertisement
ರಾಜ್ಯದಲ್ಲಿ ಕಳೆದ ಎರಡು ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳು ಆಗಿವೆ. ಉಳಿದ ಅವಧಿಯಲ್ಲಿ ಉತ್ತಮ ಆಡಳಿತ ನಡೆಸುವುದರ ಜೊತೆಗೆ ಪಕ್ಷವನ್ನು ಕಟ್ಟುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಯೋಜನೆ ರೂಪಿಸಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.