ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ 15 ವರ್ಷದ ಅಪ್ರಾಪ್ತೆ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರ ಕರ್ತವ್ಯಲೋಪದ ಆರೋಪವಿತ್ತು. ಈ ಹಿನ್ನೆಲೆ ನಿನ್ನೆ ಸರ್ಕಲ್ ಇನ್‍ಸ್ಪೆಕ್ಟರ್ ಸಿದ್ರಾಮಪ್ಪ ಅಮಾನತ್ತಾಗಿದ್ದರು. ಇಂದು ಪಿಎಸ್‍ಐ ಕೀರ್ತಿ ಕುಮಾರ್ ವರ್ಗಾವಣೆಗೊಂಡಿದ್ದಾರೆ.
ಸರ್ಕಲ್ ಇನ್‍ಸ್ಪೆಕ್ಟರ್ ಸಿದ್ರಾಮಪ್ಪರನ್ನ ಅಮಾನತಾದ ಬೆನ್ನಲ್ಲೇ ಇಂದು ಶೃಂಗೇರಿ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಕೀರ್ತಿ ಕುಮಾರ್ ಕೂಡ ಕರ್ತವ್ಯಲೋಪದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಶುಕ್ರವಾರ ಆರೋಪಿಗಳನ್ನ ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜಕೀಯ ಒತ್ತಡದಿಂದ ಹಲವು ಆರೋಪಿಗಳನ್ನ ಬಂಧಿಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಈ ಅತ್ಯಾಚಾರದ ಪ್ರಕರಣದಲ್ಲಿ ಪೊಲೀಸರು ಅಮಾಯಕ ಯುವಕರನ್ನ ಹೆದರಿಸಿ ಹಣ ಕೀಳುತ್ತಿದ್ದಾರೆ. ಅಪ್ರಾಪ್ತೆಯ ಅತ್ಯಾಚಾರ ಪ್ರಕಣದಲ್ಲಿ ಪೊಲೀಸ್ ಇಂಟಲಿಜೆನ್ಸ್ ಸಂಪೂರ್ಣ ವಿಫಲವಾಗಿದ್ದು, ಸರ್ಕಲ್ ಇನ್‍ಸ್ಪೆಕ್ಟರ್ ಹಾಗೂ ಸಬ್ ಇನ್‍ಸ್ಪೆಕ್ಟರ್ ಕರ್ತವ್ಯಲೋಪ ಎದ್ದು ಕಾಣುತ್ತಿದೆ ಎಂಬ ಆರೋಪದ ಹಿನ್ನೆಲೆ ಸಿಪಿಐ ಅಮಾನತ್ತಾದ್ರೆ, ಪಿಎಸ್‍ಐ ವರ್ಗಾವಣೆಗೊಂಡಿದ್ದಾರೆ. ಇದೀಗ, ಗವಿರಾಜ್‍ರನ್ನ ಶೃಂಗೇರಿಗೆ ಸರ್ಕಲ್ ಇನ್‍ಸ್ಪೆಕ್ಟರ್ ಆಗಿ ನೇಮಕ ಮಾಡಿದ್ದು, ರಕ್ಷಿತ್ ರನ್ನ ಸಬ್ ಇನ್‍ಸ್ಪೆಕ್ಟರ್ ಆಗಿ ನೇಮಕ ಮಾಡಿದ್ದಾರೆ. ಅತ್ಯಾಚಾರ ಪ್ರಕರಣದ ತನಿಖೆಗೆ ನಾಲ್ಕು ತಂಡವನ್ನ ರಚನೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಪ್ರಕಣದ ತನಿಖೆಯ ಜವಾಬ್ದಾರಿ ಹೊತ್ತಿದ್ದಾರೆ.
ಫೆಬ್ರವರಿ 5ರ ಶುಕ್ರವಾರ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಶೃಂಗೇರಿಯ ಠಾಣೆಯ ಎದುರು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸರ್ಕಲ್ ಇನ್‍ಸ್ಪೆಕ್ಟರ್ ಸಿದ್ರಾಮಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಸಿದ್ರಾಮಪ್ಪನ ಅಮಾನತ್ತಿಗೆ ಆಗ್ರಹಿಸಿದ್ದರು. ಈ ವೇಳೆ, ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಸರ್ಕಲ್ ಇನ್‍ಸ್ಪೆಕ್ಟರ್ ಸಿದ್ರಾಮಪ್ಪರನ್ನ ಅಮಾನತು ಮಾಡಿ ಆದೇಶಿಸಿದ್ದರು.