ಬೆಂಗಳೂರು: ಕೊರೊನಾ ಅಟ್ಟಹಾಸ, ಡಿಜೆ ಹಳ್ಳಿ ಗಲಾಟೆ, ಡ್ರಗ್ಸ್ ರಂಪಾಟದ ನಡುವೆ ರಾಜ್ಯ ರಾಜಕಾರಣದಲ್ಲಿ ಸೈಲೆಂಟ್ ಆಗಿ ವಿದ್ಯಮಾನಗಳು ಚುರುಕು ಪಡೆದಿವೆ. ಸಂಪುಟ ಪುನಾರಚನೆಯ ಚರ್ಚೆಗಳು ಜೋರಾಗಿ ಕೇಳಿಬರುತ್ತಿವೆ. ಈ ಬೆನ್ನಲ್ಲೇ ಸೋಮವಾರ ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಸಂಪುಟ ಸಭೆ ಕರೆದಿದ್ದಾರೆ.
ಮುಂದಿನ ವಾರ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ಸಂಪುಟ ಪುನಾರಚನೆಯಾದರೆ ಮೂರ್ನಾಲ್ಕು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಹಿನ್ನೆಲೆಯಲ್ಲಿ ಆ ಸಚಿವರ ವಿಶ್ವಾಸ ಗಳಿಸಲು ಸಿಎಂ ಯತ್ನಿಸ್ತಿದ್ದಾರೆ. ಇದರ ಭಾಗವಾಗಿಯೇ ನಾಳೆ ಸಂಪುಟ ಸಭೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಇನ್ನು ನಾಳೆಯ ಸಭೆಯಲ್ಲಿ ಸೆಪ್ಟೆಂಬರ್ 21ರಿಂದ ಆರಂಭ ಆಗಲಿರುವ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳನ್ನು ಎದುರಿಸುವ ಬಗ್ಗೆಯೂ ಚರ್ಚೆ ನಡೆಯುವ ಸಂಭವ ಇದೆ. ಡ್ರಗ್ಸ್ ದಂಧೆ, ಕೆಜಿ-ಡಿಜೆ ಹಳ್ಳಿ ಗಲಭೆ, ಕೊರೋನಾ ನಿರ್ವಹಣೆ, ವೈದ್ಯಕೀಯ ಉಪಕರಣ ಖರೀದಿ ಅಕ್ರಮ ಆರೋಪ ಪ್ರಕರಣ ಸೇರಿ ಹಲವು ವಿಷಯಗಳಲ್ಲಿ ಸರ್ಕಾರ ಕಟ್ಟಿ ಹಾಕಲು ವಿಪಕ್ಷಗಳು ಪ್ಲಾನ್ ಮಾಡ್ತಿದ್ದು, ಇದಕ್ಕೆ ತಿರುಗೇಟು ನೀಡಲು ರಣತಂತ್ರ ರೂಪಿಸಲಾಗುತ್ತದೆ ಎನ್ನಲಾಗಿದೆ
ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯನ್ನು ರಮೇಶ್ ಜಾರಕಿಹೊಳಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.