ಬೆಂಗಳೂರು: ಶೀಘ್ರವೇ ಪಿಯುಸಿ ಶಿಕ್ಷಣ ಮಂಡಳಿ ಮತ್ತು ಎಸ್‍ಎಸ್‍ಎಲ್‍ಸಿ ಮಂಡಳಿ ಎರಡನ್ನು ವಿಲೀನ ಮಾಡುತ್ತೇವೆ. ಎರಡು ಮಂಡಳಿಗಳನ್ನು ಒಂದೇ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಯುಸಿ ಬೋರ್ಡ್ ಮತ್ತು ಎಸ್‍ಎಸ್‍ಎಲ್‍ಸಿ ಬೋರ್ಡ್ ಎರಡನ್ನು ವಿಲೀನ ಮಾಡಲು ಸರ್ಕಾರದ ನಿರ್ಧರಿಸಿದೆ. “ಪ್ರಾಥಮಿಕ ಶಿಕ್ಷಣ ಪರಿಷತ್” ಶಿಕ್ಷಣ ಇಲಾಖೆಯಲ್ಲಿ ಪ್ರಾರಂಭ ಮಾಡುತ್ತೇವೆ. ಸ್ವಾಭಿಮಾನಿ ಸರ್ಕಾರಿ ಶಾಲೆಯಾಗಿ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಮಾಡುತ್ತೇವೆ. ಉತ್ತಮ ಶಿಕ್ಷಕರಿಗೆ ವಿಶೇಷ ಪ್ರಶಸ್ತಿ ನೀಡುವ ಕೆಲಸವನ್ನು ಇಲಾಖೆ ಮಾಡುತ್ತದೆ ಎಂದರು.
Advertisement
Advertisement
ನಿನ್ನೆಗೆ ನಾನು ಶಿಕ್ಷಣ ಇಲಾಖೆಯ ಸಚಿವನಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ಇದೊಂದು ಸವಾಲುಗಳಿಂದ ಕೂಡಿದ ವರ್ಷವಾಗಿತ್ತು. ಪ್ರಾರಂಭದಲ್ಲೇ ಪ್ರವಾಹದಿಂದ ಶಾಲಾ ಕಟ್ಟಡಗಳು ಬಿದ್ದು ಹೋದವು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಆರ್ಥಿಕ ಶಕ್ತಿ ನೀಡಿದರು. ಇದಾಗುತ್ತಿದಂತೆ ಕೊರೊನಾ ಸೋಂಕಿನ ಪ್ರಭಾವ ಹೆಚ್ಚಾಗಿತ್ತು. ಇದು ಶಿಕ್ಷಣ ಇಲಾಖೆ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದರು.
Advertisement
ಕೊರೊನಾ ಕಾರಣದಿಂದ ಶಾಲೆ ಯಾವಾಗ ಪ್ರಾರಂಭ ಮಾಡೋದು, ಹೇಗೆ ತರಗತಿ ನಡೆಸುವುದು ಎಂಬುವುದು ಇನ್ನು ಗೊತ್ತಿಲ್ಲ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಕೋವಿಡ್ ಸಮಯದಲ್ಲೇ ಯಶಸ್ವಿಯಾಗಿ ನಡೆಸಿದ್ದೇವೆ. ಸಿಎಂ ಯಡಿಯೂರಪ್ಪ ನಮಗೆ ಧೈರ್ಯ ಕೊಟ್ಟು ಪರೀಕ್ಷೆ ಮಾಡಿಸಿದರು. ಆ ಬಳಿಕ ಪಿಯುಸಿ ಪರೀಕ್ಷೆ ಕೂಡ ಮಾಡಿದ್ದೇವು. ಆದ್ದರಿಂದ ನೀಟ್, ಜೆಇಇ ಪರೀಕ್ಷೆ ಬೇಡ ಎನ್ನುವರರು ನಮ್ಮ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕಡೆ ಒಮ್ಮೆ ನೋಡಲಿ ಎಂದರು.
Advertisement
ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಸಮಸ್ಯೆ ಇತ್ತು. ಈಗ ಅದಕ್ಕೆ ಹೊಸ ಕಾನೂನು ಜಾರಿಗೆ ತಂದಿದ್ದೇನೆ. ಸೆಪ್ಟೆಂಬರ್ ನಲ್ಲಿ ಶಿಕ್ಷಣ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ಶಿಕ್ಷಣ ತಜ್ಞರ ಮಾರ್ಗದರ್ಶನದಲ್ಲಿ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಈ ವರ್ಷ 1 ಸಾವಿರ ಉಭಯ ಮಾಧ್ಯಮಗಳ ತರಗತಿ ಪ್ರಾರಂಭ ಮಾಡುತ್ತೇವೆ. ಹೊಸ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಇದನ್ನು ರಾಜ್ಯದಲ್ಲಿ ಜಾರಿ ಮಾಡುತ್ತೇವೆ ಎಂದು ವಿವರಿಸಿದರು.