ಶೀಘ್ರದಲ್ಲೇ ಮದ್ಯದ ದೊರೆ ಮಲ್ಯ ಭಾರತಕ್ಕೆ

Public TV
3 Min Read
VIJAY MALLYA

ನವದೆಹಲಿ: ಭಾರತದ ಬ್ಯಾಂಕ್‍ಗಳಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ವಿದೇಶದಲ್ಲಿ ತಲೆಮರಿಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು.

ರಾಜತಾಂತ್ರಿಕ ರಂಗದಲ್ಲಿ ಭಾರತಕ್ಕೆ ಯಶಸ್ಸು ಸಿಕ್ಕಿದ್ದು, ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವ ಬಗ್ಗೆ ಬ್ರಿಟಿಷ್ ನ್ಯಾಯಾಲಯ ಈಗಾಗಲೇ ಮುದ್ರೆ ಹಾಕಿದೆ. ವಿಜಯ್ ಮಲ್ಯ ಬ್ಯಾಂಕ್ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಈ ಸಂಬಂಧ ಬ್ರಿಟನ್‍ನಲ್ಲಿ ಎಲ್ಲಾ ಕಾನೂನು ವಿಧಿವಿಧಾನಗಳು ಪೂರ್ಣಗೊಂಡಿವೆ. ಹೀಗಾಗಿ ಅವರನ್ನು ಯಾವುದೇ ಸಮಯದಲ್ಲಿ ಭಾರತಕ್ಕೆ ಮರಳಿ ತರಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

court 1

ಮಲ್ಯ ಅವರನ್ನು ಬಂಧಿಸಿದ ಬಳಿಕ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ವೈದ್ಯಕೀಯ ತಂಡವು ಮದ್ಯದ ದೊರೆಯ ಆರೋಗ್ಯ ತಪಾಸಣೆ ನಡೆಸಲಿದೆ. ಒಂದು ವೇಳೆ ರಾತ್ರಿಯಾಗಿದ್ದರೆ ಮುಂಬೈನ ಸಿಬಿಐ ಕಚೇರಿಯಲ್ಲಿ ಇರಿಸಿ, ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇಲ್ಲವೇ ಹಗಲಿನಲ್ಲಿ ಭಾರತಕ್ಕೆ ಬಂದರೆ ನೇರವಾಗಿ ವಿಮಾನ ನಿಲ್ದಾಣದಿಂದ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ ಎನ್ನಲಾಗಿದೆ.

ಬ್ರಿಟಿಷ್ ನ್ಯಾಯಾಲಯವು 2018ರ ಆಗಸ್ಟ್ ನಲ್ಲಿ ಭಾರತದ ಮನವಿಯನ್ನು ಆಲಿಸುತ್ತಿದ್ದಾಗ ಹಸ್ತಾಂತರದ ನಂತರ ಮಲ್ಯ ಅವರನ್ನು ಎಲ್ಲಿ ಇರಿಸಲಾಗುವುದು ಎಂದು ಪ್ರಶ್ನಿಸಿತ್ತು. ಆಗ ಭಾರತೀಯ ತನಿಖಾ ಸಂಸ್ಥೆಯು ಜೈಲಿನ ವಿವರಗಳನ್ನು ನೀಡಿತ್ತು.

Vijay Mallya 1

ಆರ್ಥರ್ ರೋಡ್ ಜೈಲು:
ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಹೈ ಸೆಕ್ಯುರಿಟಿ ಬ್ಯಾರಕ್‍ನಲ್ಲಿ ಇಡುವುದಾಗಿ ಭಾರತೀಯ ತನಿಖಾ ಸಂಸ್ಥೆಯು ಬ್ರಿಟನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಆರ್ಥರ್ ರೋಡ್ ಜೈಲಿನಲ್ಲಿ ಅನೇಕ ಭೂಗತ ಪಾತಕಿಗಳು, ದೊಡ್ಡ ಅಪರಾಧಿಗಳು ಮತ್ತು ಭಯೋತ್ಪಾದಕರನ್ನು ಇರಿಸಲಾಗಿದೆ. ಶೀನ್ ಬೋರಾ ಕೊಲೆ ಪ್ರಕರಣದ ಆರೋಪಿ ಪೀಟರ್ ಮುಖರ್ಜಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13,500 ಕೋಟಿ ರೂ. ವಂಚಿಸಿದ್ದ ವಿಪುಲ್ ಅಂಬಾನಿಯನ್ನು ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದೆ.

ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬು ಸೇಲಂ, ಛೋಟಾ ರಾಜನ್, ಮುಸ್ತಫಾ ದೋಸ ಸೇರಿದಂತೆ ಹಲವಾರು ಕುಖ್ಯಾತ ಅಪರಾಧಿಗಳನ್ನು ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿದೆ. ಮುಂಬೈ ದಾಳಿ ನಡೆಸಿದ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಬ್ ಅವರನ್ನು ಸಹ ಅದೇ ಜೈಲಿನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಇರಿಸಲಾಗಿತ್ತು.

mallya1jpg

ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿರುವ ಮದ್ಯದ ದೊರೆ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಈಗಾಗಲೇ ಬ್ಯಾಂಕುಗಳು ಪ್ರಕಟಿಸಿವೆ.

ವಿಜಯ್ ಮಲ್ಯ ಬ್ರಿಟನ್ ಪ್ರಜೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಗಡಿಪಾರು ಮಾಡುವಂತೆ ಇಂಗ್ಲೆಂಡ್ ಸರ್ಕಾರವನ್ನು ಕೇಳಿಕೊಂಡಿತ್ತು. ಸುಮಾರು 9,000 ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು 2018ರ ಡಿಸೆಂಬರ್‍ನಲ್ಲಿ ಬ್ರಿಟನ್‍ನ ವೆಸ್ಟ್ ಮಿನ್‍ಸ್ಟರ್ ನ್ಯಾಯಾಲಯ ಆದೇಶ ನೀಡಿತ್ತು. ಮಲ್ಯ ಗಡಿಪಾರಿಗೆ 2019ರ ಫೆಬ್ರವರಿಯಲ್ಲಿ ಬ್ರಿಟನ್ ಸರ್ಕಾರ ಸಮ್ಮತಿ ನೀಡಿತ್ತು. ಬಳಿಕ ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.

court

ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ಏ.4 ರಂದು ತಿರಸ್ಕರಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ಟೀಫನ್ ಒರ್ವಿನ್ ಮತ್ತು ಎಲಿಜಬೆತ್ ಲೇಯಿಂಗ್ ಅವರಿದ್ದ ದ್ವಿಸದಸ್ಯ ಪೀಠ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿತ್ತು.

ಪ್ರಕರಣಕ್ಕೆ ಸಂಬಂಧ ಜಿಲ್ಲಾ ಹಿರಿಯ ನ್ಯಾಯಾಧೀಶರು ಕಂಡುಕೊಂಡಿರುವ ಪ್ರಾಥಮಿಕ ಅಂಶವು ಕೆಲವು ವಿಷಯಗಳಲ್ಲಿ ಭಾರತದ ಪ್ರತಿವಾದಿಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಮಾಡಿರುವ ಆರೋಪಗಳಿಗಿಂತಲೂ ವಿಸ್ತಾರವಾಗಿವೆ. ಈ ಅಂಶವು ಭಾರತ ಮಾಡಿರುವ ಏಳು ಆರೋಪಗಳಿಗೆ ಹೊಂದಿಕೆಯಾಗುತ್ತಿದ್ದು, ಮಲ್ಯ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಲು ಯಾವುದೇ ಪ್ರಮುಖ ಅಂಶಗಳಿಲ್ಲ ಎಂದು ಪೀಠ ಹೇಳಿತ್ತು.

VIJAY MALLYA

Share This Article
Leave a Comment

Leave a Reply

Your email address will not be published. Required fields are marked *