ಗದಗ: ನಾಡಗೀತೆ ಬಹಳ ಸುದೀರ್ಘವಾಗಿ ಇರುವುದರಿಂದಾಗಿ ಪುನರ್ ಪರಿಶೀಲನೆ ಮಾಡಿ ಶೀಘ್ರದಲ್ಲೇ ನಾಡಗೀತೆ ಕಡಿತಕ್ಕೆ ಚಿಂತನೆ ನಡೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.
Advertisement
ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಹಾಗೂ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅರವಿಂದ್ ಲಿಂಬಾವಳಿ, ನಾಡಗೀತೆಗೆ ಶೀಘ್ರದಲ್ಲೆ ಕತ್ತರಿ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಸಾಹಿತಿಗಳು ಮತ್ತು ತಜ್ಞರ ಸಭೆ ಕರೆದು ಶೀಘ್ರ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
Advertisement
ನಾಡಗೀತೆ ದೊಡ್ಡದಾಗಿರುವುದರಿಂದ ಹಿರಿಯ ವಯಸ್ಕರು ನಿಂತುಕೊಳ್ಳಲು ಕಷ್ಟ ಆಗುತ್ತಿದೆ. ಹಾಗಾಗಿ ಈ ಹಿಂದೆಯೂ ನಾಡಗೀತೆಯ ಕಡಿತ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಕಡಿಮೆ ಅವಧಿಯಲ್ಲಿ ಸಂಪೂರ್ಣ ನಾಡಗೀತೆ ಹಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದರು.
Advertisement
Advertisement
ಕೊರೊನಾ ಮತ್ತೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿ, ಕೊರೊನಾದಿಂದ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ಮುಂದೂಡಿಕೆಗೆ ಚಿಂತನೆ ಮಾಡಲಾಗಿದೆ. ಮಾರ್ಚ್ 9 ರಂದು ಸಮ್ಮೇಳನ ಬಗ್ಗೆ ಪೂರ್ವಭಾವಿ ಸಭೆ ಮಾಡಬೇಕಿತ್ತು. ಆದರೆ ನಿನ್ನೆ ಕರ್ನಾಟಕ ಸರ್ಕಾರ 500 ಕ್ಕಿಂತ ಹೆಚ್ಚು ಜನ ಸೇರಬಾರದೆಂದು ಹೊಸ ಆದೇಶ ಹೊರಡಿಸಿರುವುದರಿಂದಾಗಿ ಸಾಹಿತ್ಯ ಸಮ್ಮೇಳನ ಮುಂದೂಡಿಕೆ ಬಗ್ಗೆ ನಾನು ಚಿಂತನೆ ಮಾಡುತ್ತಿದ್ದೇನೆ. ಸಹಜವಾಗಿ ಸರ್ಕಾರ ಜನರ ಬಗ್ಗೆ ಕಾಳಜಿ ಇರುವುದರಿಂದ ಹೊಸ ನೀತಿ ರೂಪಿಸುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಇದರ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಮೊದಲು ಸಚಿವರು ಬೆಂಕಿಗಾಹುತಿಯಾದ ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಹಾಗೂ ಗಣಿಗಾರಿಕೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು.
ಸಚಿವರೊಂದಿಗೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.