– ಬಡವರಿಗೆ 100ರಿಂದ 200 ರೂ.ಗೆ ಒಂದು ಟನ್ ಮರಳು
– ಗ್ರಾಮಪಂಚಾಯ್ತಿಯಿಂದ ನಗರಸಭೆವರೆಗೂ ಸೌಲಭ್ಯ
ಬೆಂಗಳೂರು: ರಾಜ್ಯದಲ್ಲಿ ಬಡವರು ಹಾಗೂ ಜನ ಸಾಮಾನ್ಯರು 10 ಲಕ್ಷದೊಳಗೆ ಮನೆ ಕಟ್ಟಲು ಅನುಕೂಲವಾಗುವಂತೆ ಶೀಘ್ರದಲ್ಲೇ ನೂತನ ಉಚಿತ ಮರಳು ನೀತಿಯನ್ನು ಜಾರಿಗೆ ತರಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ವಿಧಾನಸಭೆಯಲ್ಲಿ ಘೋಷಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮರಳು ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆಶ್ರಯ ಮನೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ 10 ಲಕ್ಷದೊಳಗಿನ ಮನೆಗೆ 100ರಿಂದ 200 ರೂ.ಗೆ ಒಂದು ಟನ್ ದರದಲ್ಲಿ ಪೂರೈಕೆ ಮಾಡುವ ಉಚಿತ ಮರಳು ನೀತಿಯನ್ನು ಜಾರಿಗೆ ಮಾಡುತ್ತೇವೆ ಎಂದು ಪ್ರಕಟಿಸಿದರು.
ಸರ್ಕಾರದಿಂದಲೇ ಉಚಿತವಾಗಿ ಮರಳು ಪೂರೈಕೆ ಮಾಡುವ ಯೋಜನೆ ಇದೆ. ಗ್ರಾಮ ಪಂಚಾಯಿತಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡುವವರೆಗೆ ಇದು ಅನುಕೂಲವಾಗಲಿದೆ. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳ, ತೊರೆ ಮತ್ತಿತರ ಕಡೆ ಎತ್ತಿನಗಾಡಿ ಮೂಲಕ ಮರಳು ಸಾಗಿಸಲು ಅವಕಾಶ ಕಲ್ಪಿಸಿದ್ದೇವೆ. ಪ್ರಸ್ತುತ ರಾಜ್ಯದ 193 ಮರಳು ನಿಕ್ಷೇಪ ಪ್ರದೇಶಗಳನ್ನು ಗುರುತಿಸಿ 87 ಬ್ಲಾಕ್‍ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
1,2 ಮತ್ತು 3ನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾ.ಪಂ. ಮೂಲಕ ವಿಲೇವಾರಿ ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ 4,5 ಮತ್ತು 6ನೇ ಶ್ರೇಣಿಯ ಹೊಳೆ, ನದಿ, ಅಣೆಕಟ್ಟು, ಜಲಾಶಯ, ಬ್ಯಾರೇಜ್ ಹಾಗೂ ಅಣೆಕಟ್ಟಿನ ಇನ್ನೀರಿನ ಪ್ರದೇಶಗಳಲ್ಲಿ ಮರಳು ತೆಗೆಯಲು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಮತ್ತು ಹಟ್ಟಿ ಚಿನ್ನದ ಗಣಿಗೆ ವಹಿಸಲಾಗಿದೆ ಎಂದರು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ 46 ಹಾಗೂ ಹಟ್ಟಿ ಚಿನ್ನದ ಗಣಿಶ್ರೇಣಿಯ 43 ಮರಳು ಬ್ಲಾಕ್‍ಗಳಲ್ಲಿ ಗಣಗಾರಿಕೆ ನಡೆಸಲು ಆಯಾ ಜಿಲ್ಲಾ ಮರಳು ಸಮಿತಿಗಳಿಂದ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ರಾಜ್ಯದ ಬಹುತೇಕ ಕಡೆ ಒಂದೇ ಪರ್ಮಿಟ್‍ನಲ್ಲಿ ಅನೇಕರು ಕಾನೂನು ಬಾಹಿರವಾಗಿ ಮರಳು ಸಾಗಿಸುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಈಗಾಗಲೇ ಅನೇಕ ಕಡೆ ಸಭೆಗಳನ್ನು ನಡೆಸಿ ಇದಕ್ಕೆ ಕಡಿವಾಣ ಹಾಕಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ಅಧಿಕಾರಿಗಳನ್ನು ತನಿಖೆ ನಡೆಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಒಂದು ವೇಳೆ ನಮ್ಮ ಇಲಾಖೆಯ ಅಧಿಕಾರಿಗಳು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ನಾನು ಪ್ರವಾಸ ಮಾಡಿದ ರಾಜ್ಯದ ಎಲ್ಲ ಕಡೆ ಮರಳಿನ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಕಂದಾಯ, ಅರಣ್ಯ, ಗೃಹ, ಪರಿಸರ ಮತ್ತು ಮಾಲಿನ್ಯನಿಯಂತ್ರಣ ಮಂಡಳಿಯಲ್ಲಿ ಇಂತಹ ದೂರುಗಳು ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಏಕಗಾವಾಕ್ಷಿ ಪದ್ಧತಿಯನ್ನು ಜಾರಿ ಮಾಡುತ್ತಿರುವುದಾಗಿ ತಿಳಿಸಿದರು.
ಮರಳುಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 150 ಕೋಟಿ ರೂ. ಆದಾಯ ಬರುತ್ತದೆ. ಕೆಲವು ಕಡೆ ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಎಲ್ಲಿಯೂ ಕೂಡ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಕೊಡುತ್ತಿಲ್ಲ. ಒಂದು ವೇಳೆ ನನ್ನ ಗಮನಕ್ಕೆ ಬಂದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸುವುದು ಖಚಿತ ಎಂದರು.
ನಾನು ಸಚಿವನಾದ ನಂತರ ಜಿಲ್ಲಾ ಪ್ರವಾಸ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಮಣ್ಣನ್ನು ಫಿಲ್ಟರ್ ಮಾಡಿ ಕೆಲವು ಕಡೆ ಮರಳು ತಯಾರಿಸುತ್ತಿದ್ದಾರೆ ಎಂಬ ಆರೋಪವೂ ಇದೆ. ಇಂತಹ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಸುಮ್ಮನೆ ಬಿಡುವುದಿಲ್ಲ. ಅವರ ಮೇಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಹಾಸನ ಸೇರಿದಂತೆ ರಾಜ್ಯದ ಅನೇಕ ಕಡೆ ಮಣ್ಣನ್ನು ಫಿಲ್ಟರ್ ಮಾಡಿ ಮರಳಿನ ರೂಪದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ಬಳಕೆ ಮಾಡಿ ಮನೆ ಕಟ್ಟಿದರೆ ಕಟ್ಟಡಗಳು ಉರುಳಿ ಬೀಳುತ್ತವೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಶಾಸಕ ಡಾ.ಅನ್ನದಾನಿ ಮಾತನಾಡಿ, ರೈತರಿಗೆ ಎತ್ತಿನಗಾಡಿಯಲ್ಲಿ ಮರಳು ಸಾಗಾಣೆ ಮಾಡಲು ಅವಕಾಶ ಕೊಟ್ಟಿದ್ದೀರಿ ಎಂದು ಹೇಳುತ್ತೀರಿ. ಹಳ್ಳ-ಕೊಳ್ಳ, ಕೆರೆ ಮತ್ತಿತರ ಕಡೆ ಮರಳು ತೆಗೆಯಲು ಹೋದರೆ ಪೆÇಲೀಸರು ರೈತರ ಎತ್ತಿನಗಾಡಿಗಳನ್ನೇ ವಶಪಡಿಸಿಕೊಂಡಿದ್ದಾರೆ. ರಾತ್ರಿ ವೇಳೆ ಟ್ರ್ಯಾಕ್ಟರ್, ಲಾರಿಗಳಲ್ಲಿ ಮರಳು ಸಾಗಾಣಿಕೆ ಮಾಡಿದರೂ ಪೆÇಲೀಸರು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಇದಕ್ಕೆ ದನಿಗೂಡಿಸಿದ ಶಾಸಕ ಎಚ್.ಡಿ.ರೇವಣ್ಣ, ಬಹುತೇಕ ಕಡೆ ಇಂತಹ ಅಕ್ರಮ ನಡೆಯಿತ್ತಿದೆ. ಇದನ್ನು ಪರಿಶೀಲಿಸಲು ನಿಮ್ಮ ಇಲಾಖೆಯಲ್ಲಿ ಅಧಿಕಾರಿಗಳೇ ಇಲ್ಲ. ಒಂದಿಬ್ಬರು ಇದ್ದರೂ ಅವರು ಏನೂ ಮಾಡಲಾಗದ ಸ್ಥಿತಿಗತಿಯಲ್ಲಿ ಇರುತ್ತಾರೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಅಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ. ಸಣ್ಣ ಪ್ರಮಾಣದಲ್ಲಿ ಮರಳು ಸಾಗಾಣಿಕೆ ಮಾಡಿದರೆ ರೈತರ ಮೇಲೆ ಮೊಕದ್ದಮೆ ದಾಖಲಿಸುತ್ತೀರಿ. ಸರ್ಕಾರದ ಬೊಕ್ಕಸಕ್ಕೆ ನೂರಾನು ಕೋಟಿ ನಷ್ಟವಾಗುತ್ತಿದೆ. ಮೊದಲು ಇದನ್ನು ಸರಿಪಡಿಸಲು ಸ್ಪಷ್ಟವಾದ ಕಾನೂನು ತನ್ನಿ ಎಂದರು.