– ಪ್ರತಿ ಸವಾಲ್ ಹಾಕಿದ ಶಾಸಕ ಶಿವಲಿಂಗೇಗೌಡ
ಹಾಸನ: ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಇದೀಗ ಇದೇ ಸಂತೋಷ್, ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ವಿರುದ್ಧ ಆರೋಪ ಮಾಡುತ್ತಾ ಹೋರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಕೆರಳಿದ ಶಾಸಕ ಶಿವಲಿಂಗೇಗೌಡ ಸಂತೋಷ್‍ಗೆ ಸಖತ್ತಾಗೆ ತಿರುಗೇಟು ನೀಡಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದಲ್ಲಿ ಸಂತೋಷ್ ಈಗಾಗಲೇ ಓಡಾಟ ಶುರು ಮಾಡಿದ್ದು, ಹಾಲಿ ಶಾಸಕ ಶಿವಲಿಂಗೇಗೌಡ ವಿರುದ್ಧ ಹರಿಹಾಯುತ್ತಿದ್ದಾರೆ. ಶಾಸಕ ಶಿವಲಿಂಗೇಗೌಡ ಸರಿಯಾಗಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಶಾಸಕರ ವಿರುದ್ಧ ಉತ್ತರ ಕೊಡಿ, ಲೆಕ್ಕ ಕೊಡಿ ಎಂದು ಕರಪತ್ರ ಹಂಚಿಕೆ ಮಾಡುತ್ತೇವೆ. ಜನ ಈ ಶಾಸಕರನ್ನು ಕಾಂಕ್ರೀಟ್ ಎಂಎಲ್‍ಎ ಅಂತಿದ್ದಾರೆ ಎಂದಿದ್ದಾರೆ.
Advertisement
Advertisement
ಜೆಲ್ಲಿ ಕ್ರಷರ್, ಎಂ ಸ್ಯಾಂಡ್ ಯೂನಿಟ್, ಸಿಮೆಂಟ್ ಗೋಡೌನ್‍ಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಚೀಟಿ ಕೊಟ್ಟು, ಶಾಸಕರು ಮೆಟಿರಿಯಲ್ ಮಾರಿಕೊಳ್ಳುತ್ತಿದ್ದಾರೆ. ಶಾಸಕರ ಆಪ್ತರೊಬ್ಬರ ಕಪಿಮುಷ್ಟಿಯಲ್ಲಿ ಅರಸೀಕೆರೆ ನಗರಸಭೆ ಇದ್ದು, ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಆರೋಪ ಮಾಡುತ್ತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್, ಶಾಸಕರ ವಿರುದ್ಧ ಹೋರಾಟದ ಎಚ್ಚರಿಕೆ ನೀಡುತ್ತಿದ್ದಾರೆ.
Advertisement
Advertisement
ಆದರೆ ಸಂತೋಷ್ ಆರೋಪಕ್ಕೆ ಖಡಕ್ಕಾಗೇ ತಿರುಗೇಟು ನೀಡಿರುವ ಶಾಸಕ ಶಿವಲಿಂಗೇಗೌಡ, ಒಂದು ಟೆಂಡರ್ ತಂದು ಕೆಲಸ ಮಾಡೋ ಕಷ್ಟ ನಮಗೆ ಗೊತ್ತಿದೆ. ಕೆಲವೊಂದು ಕೆಲಸ ತಡವಾಗಲು ವೈಜ್ಞಾನಿಕ ಕಾರಣಗಳಿವೆ. ಏನು ಗೊತ್ತಿಲ್ಲದೆ ಅರಸೀಕೆರೆ ಜನರಿಗೆ ಸುಳ್ಳು ಹೇಳಲು ಬಂದವರಿಗೆ ನಾಚಿಕೆ ಆಗಬೇಕು. ಮಾನ ಮರ್ಯಾದೆ ಇದ್ದರೆ ಗೌರವಯುತವಾಗಿ ನಡೆದುಕೊಳ್ಳಬೇಕು. ಇಡೀ ತಾಲೂಕಲ್ಲಿ ಜನರಿಗೆ ಕುಡಿಯುವ ನೀರು ಕೊಡುವ ಕೆಲಸ ಮಾಡಿದ್ದೇನೆ. ಇಡೀ ತಾಲೂಕಿಗೆ ಕಾಂಕ್ರೀಟ್ ಹಾಕಿಸಿದ್ದೇನೆ. ಇದಕ್ಕೆ ಕಾಂಕ್ರೀಟ್ ಎಂಎಲ್‍ಎ ಎಂದು ವ್ಯಂಗ್ಯವಾಡುತ್ತಾರೆ ಎಂದು ತಿಳಿಸಿದ್ದಾರೆ.
ಯಾವುದೇ ಕಾಮಾಗಾರಿಯಲ್ಲಿ ಶಿವಲಿಂಗೇಗೌಡ ಯಾರ ಬಳಿಯಾದರೂ ಹಣ ತೆಗೆದುಕೊಂಡಿದ್ದಾನೆ ಅಂದರೆ ಈಗಲೇ ಇವನು ಹೇಳಿದ ಶಿಕ್ಷೆಗೆ ಗುರಿಯಾಗುತ್ತೇನೆ. ಕಳೆದ ಎಂಪಿ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿಗೆ 74 ಸಾವಿರ ಮತ ಬಂದಿತ್ತು. ಹೀಗಾಗಿ ಏನಾದರೂ ಆಗುತ್ತೆ ಅಂತಾ ಬಂದಿದ್ದಾರೆ. ಮುಖ್ಯಮಂತ್ರಿಗಳು ನೀಡಿರುವ ಅಧಿಕಾರದ ಅಮಲಿನಲ್ಲಿ ಮಾತನಾಡುತ್ತಿದ್ದಾರೆ. ಮಾತನಾಡುವಾಗ ಗೌರವಯುತವಾಗಿ ಮಾತನಾಡಬೇಕು ಎಂದು ಸಂತೋಷ್ ವಿರುದ್ಧ ಶಾಸಕ ಶಿವಲಿಂಗೇಗೌಡ ಹರಿಹಾಯ್ದಿದ್ದಾರೆ.