ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಕೊರೊನಾ ಪಾಸಿಟಿವ್ ಬಂದಿದ್ದು, ಪರಿಣಾಮ ಅವರ ಆಸ್ಪತ್ರೆ ವಾಸ್ತವ್ಯ ಮುಂದುವರಿದಿದೆ.
ಈ ಹಿಂದೆ ಕೊರೊನಾ ಪಾಸಿಟಿವ್ ಬಂದು ಸಿಎಂ ಅವರು ಜುಲೈ 25ರಿಂದ ಚಿರಾಯು ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮತ್ತೆ ಅವರನ್ನು ಟೆಸ್ಟ್ ಗೆ ಒಳಪಡಿಸಿದಾಗ ಮತ್ತೆ ಪಾಸಿಟಿವ್ ಎಂದು ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಮತ್ತೆ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವಂತಾಗಿದೆ.
ಗೃಹ ಸಚಿವ ನರೊಟ್ಟಂ ಮಿಶ್ರಾ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಮುಖ್ಯಮಂತ್ರಿಗಳು ಆಸ್ಪತ್ರೆಗೆ ದಾಖಲಾಗಿ ಇಂದಿಗೆ 9 ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಇಂದಿನ ವರದಿಯಲ್ಲೂ ಪಾಸಿಟಿವ್ ಎಂದು ಬಂದಿರುವುದರಿಂದ ಅವರು ಮತ್ತೆ ಆಸ್ಪತ್ರೆಯಲ್ಲಿಯೇ ಉಳಿಯಲಿದ್ದಾರೆ ಎಂದು ತಿಳಿಸಿದರು.
ಭಾನುವಾರ ಟ್ವೀಟ್ ಮಾಡಿದ್ದ ಸಿಎಂ, ನಾನು ಆರೋಗ್ಯವಾಗಿದ್ದು, ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಒಂದು ವೇಳೆ ಈಗಿನ ಪರೀಕ್ಷೆಯಲ್ಲಿ ನೆಗೆಟಿವ್ ಅಂತ ಬಂದ್ರೆ ಆಸ್ಪತ್ರೆಯಂದ ಡಿಸ್ಚಾರ್ಜ್ ಆಗಲಿದ್ದೇನೆ ಎಂದು ಬರೆದುಕೊಂಡಿದ್ದರು.