ಶಿವಮೊಗ್ಗ: ಜಿಲ್ಲೆಯ ಸೋಗಾನೆ ಸಮೀಪ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸುಮಾರು 3,200 ಡಿಟೋನೇಟರ್ ಹಾಗೂ 36 ಬಾಕ್ಸ್ ಜಿಲೆಟಿನ್ ಪೇಸ್ಟ್ ಕಂಡು ಬಂದಿದೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗುತಿತ್ತು. ಆದರೆ ಹುಣಸೋಡು ಬ್ಲಾಸ್ಟ್ ನಂತರ ಜಲ್ಲಿ ಕ್ರಷರ್ ಘಟಕಗಳು ಸ್ಥಗಿತಗೊಂಡಿವೆ. ಈ ಕಾರಣದಿಂದಾಗಿ ಕಾಮಗಾರಿಗೆ ಅಗತ್ಯವಾಗಿ ಬೇಕಾಗಿದ್ದ ಜಲ್ಲಿ ಕೊರತೆ ಉಂಟಾಗಿತ್ತು. ಜೊತೆಗೆ ಜಲ್ಲಿ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಳ್ಳಬಹುದು ಎಂಬ ಆತಂಕ ಕೂಡ ಎದುರಾಗಿತ್ತು. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಜಲ್ಲಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದರು. ಜಲ್ಲಿ ಸಮಸ್ಯೆಯಿಂದ ಕಾಮಗಾರಿ ನಿಲ್ಲಬಾರದು ಎಂಬ ಕಾರಣದಿಂದಾಗಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ 4 ಎಕರೆ ಪ್ರದೇಶದಲ್ಲಿ ಜಲ್ಲಿ ಕ್ವಾರಿ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ನೀಡಿದ್ದರು.
ಹೀಗಾಗಿಯೇ ವಿಮಾನ ನಿಲ್ದಾಣ ಕಾಮಗಾರಿಗೆ ಬೇಕಾದ ಜಲ್ಲಿ ಮತ್ತಿತ್ತರ ಸಾಮಾಗ್ರಿಯ ಬಳಕೆಗೆ ಸ್ಫೋಟಿಸುವ ಸಲುವಾಗಿ ಸ್ಫೋಟಕಗಳನ್ನು ಅಧಿಕೃತವಾಗಿಯೇ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೋರ್ವ ಪೂರೈಕೆ ಮಾಡಿದ್ದರು. 200 ಕಿ.ಮೀ. ದೂರಕ್ಕಿಂತ ಹೆಚ್ಚು ದೂರದ ಸ್ಥಳಕ್ಕೆ ಸ್ಫೋಟಕ ಸಾಮಾಗ್ರಿ ಸಾಗಾಟ ಮಾಡಬಾರದು ಎಂಬ ನಿಯಮ ಇದೆ. ಆದರೆ ಸ್ಫೋಟಕ ಸರಬರಾಜು ಸಂಬಂಧ ಪರವಾನಗಿ ಇದ್ದರೂ ಹೆಚ್ಚು ದೂರ ಸಾಗಾಟ ಮಾಡಿದ ಪರಿಣಾಮ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹುಣಸೋಡು ಘಟನೆ ಬಳಿಕ ಜಿಲ್ಲಾಡಳಿತ ಸ್ಫೋಟಕ ವಸ್ತುವನ್ನು ಸ್ಫೋಟಿಸಲು ಅನುಮತಿ ನಿರಾಕರಿಸಿತ್ತು. ಜಿಲ್ಲಾಡಳಿತದಿಂದ ಅನುಮತಿ ದೊರೆಯದ ಕಾರಣ ಸ್ಫೋಟಕ ಸರಬರಾಜುದಾರ ಸ್ಫೋಟಕವನ್ನು ಸ್ಥಳದಲ್ಲೇ ಬಿಟ್ಟು ತೆರಳಿದ್ದಾನೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಬೆಂಗಳೂರಿನ ಬಿಡಿಡಿಎಸ್ ಹಾಗೂ ಎಎಸ್‍ಸಿ ತಂಡ ಜಂಟಿ ಪರಿಶೀಲನೆ ನಡೆಸಿ, ನ್ಯಾಯಾಲಯದ ಅನುಮತಿ ಪಡೆದು ಸ್ಫೋಟಕ ನಿಷ್ಕ್ರಿಯಗೊಳಿಸಿದ್ದಾರೆ.