ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್‍ಗಳಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ವಾರ್ಡ್‍ಗಳಲ್ಲಿ ಬಿಗಿ ಲಾಕ್‍ಡೌನ್ ಜಾರಿಗೊಳಿಸಿ ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಆದೇಶ ಹೊರಡಿಸಿದ್ದಾರೆ.
ಹೊಸ ಆದೇಶದ ಅನ್ವಯ ವಾರ್ಡ್ ನಂಬರ್ 22, 23, 29 ಹಾಗೂ 30ರಲ್ಲಿ ಸಂಪೂರ್ಣ ಲಾಕ್‍ಡೌನ್ ಹಾಗೂ ವಾರ್ಡ್ ನಂಬರ್ 12, 13, 33 ರಲ್ಲಿ ಭಾಗಶಃ ಲಾಕ್‍ಡೌನನ್ನು ಜು.23 ರಿಂದ 30ರ ವರೆಗೆ ಜಾರಿಗೊಳಿಸಿ ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಆದೇಶಸಿದ್ದಾರೆ.
ಲಾಕ್‍ಡೌನ್ ವಿಧಿಸಿರುವ ವಾರ್ಡ್‍ಗಳಲ್ಲಿ ಆಸ್ಪತ್ರೆ, ಔಷಧಿ ಅಂಗಡಿ ಹಾಗೂ ಹಾಲು ಮಾರಾಟಕ್ಕೆ ವಿನಾಯ್ತಿ ನೀಡಲಾಗಿದೆ. ಹಣ್ಣು, ದಿನಸಿ ಹಾಗೂ ತರಕಾರಿ ಮಾರಾಟಕ್ಕೆ ಮುಂಜಾನೆ 5 ರಿಂದ 10 ರವರೆಗೆ ಅವಕಾಶ ನೀಡಲಾಗಿದೆ. ಇನ್ನು ಹೊರಗಡೆ ವಾರ್ಡ್‍ನಿಂದ ಬರುವವರು ಹಾಗೂ ಈ ವಾರ್ಡ್ ನಿಂದ ಹೊರಗಡೆ ಹೋಗುವವರಿಗೆ ನಿರ್ಬಂಧಿಸಲಾಗಿದ್ದು, ಇಲ್ಲಿ ಬರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಒಂದು ವಾರದ ವರೆಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ.
ಬೆಕ್ಕಿನ ಕಲ್ಮಠ, ಬಿ.ಹೆಚ್ ರಸ್ತೆ, ಅಮೀರ್ ಅಹಮದ್ ವೃತ್ತ, ಅಶೋಕ ವೃತ್ತದಲ್ಲಿನ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ, ಓಟಿ ರಸ್ತೆ, ಬೈಪಾಸ್ ರಸ್ತೆ, ತುಂಗಾ ಹೊಸ ಬ್ರಿಡ್ಜ್‍ನ ವರೆಗೆ ಸಂಪೂರ್ಣ ಲಾಕ್‍ಡೌನ್ ಆಗಲಿದೆ ಎಂದು ಚಿದಾನಂದ ವಠಾರೆ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಹೆಚ್ಚು ಈ ಭಾಗದಲ್ಲಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಲಾಕ್‍ಡೌನ್ ವೇಳೆ ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಸಹಕರಿಸುವಂತೆ ಪಾಲಿಕೆ ಆಯುಕ್ತರ ಚಿದಾನಂದ ವಟಾರೆ ಪತ್ರಿಕಾ ಹೇಳಿಕೆಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.