– ಹೋರಾಟದಲ್ಲಿ ರಾಷ್ಟ್ರೀಯ ರೈತ ನಾಯಕರು ಭಾಗಿ
ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ನೀತಿ ಕಾಯ್ದೆ ವಿರೋಧಿಸಿ, ಸಮಾಜವಾದಿ ಹೋರಾಟದ ನೆಲದಲ್ಲಿ ಕಿಚ್ಚು ಹೊತ್ತಿಕೊಂಡಿದೆ. ಅದರಲ್ಲೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆಯಿಂದಲೇ, ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ರೈತರು ತಮ್ಮ ಹೋರಾಟ ಆರಂಭಿಸಿದ್ದಾರೆ. ರೈತ ಹೋರಾಟದ ಮುಂದಾಳು ರಾಕೇಶ್ ಸಿಂಗ್ ಟಿಕಾಯತ್, ದರ್ಶನ್ ಪಾಲ್, ಯುದವೀರ್ ಸಿಂಗ್ ನಂತಹ ರಾಷ್ಟ್ರೀಯ ರೈತ ನಾಯಕರು ಕೇಂದ್ರದ ವಿರುದ್ಧ ಮಲೆನಾಡಿನಲ್ಲಿ ಗುಡುಗಿದ್ದಾರೆ.
Advertisement
ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಮತ್ತು ಎಂಎಸ್‍ಪಿ ಖಾತ್ರಿಗೊಳಿಸುವ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿ, ಇಂದು ಮಲೆನಾಡು ಜಿಲ್ಲೆ, ಸಮಾಜವಾದಿ ಹೋರಾಟದ ನೆಲವಾಗಿರುವ ಶಿವಮೊಗ್ಗದಲ್ಲಿ ಅಕ್ಷರಶಃ ರೈತರು ಸಿಟ್ಟಿಗೆದ್ದಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ದನಿ ಎತ್ತಿದ್ದಾರೆ. ನರೇಂದ್ರ ಮೋದಿಯವರ ಹಠಮಾರಿತನ, ಮೊಂಡುತನ ರೈತರಿಗೆ ಮರಣ ಶಾಸನವಾಗಿದೆ ಎಂದು ಆರೋಪಿಸಿದ್ದಾರೆ.
Advertisement
Advertisement
ಹೌದು, ಸಿಎಂ ಬಿಎಸ್‍ವೈ ಅವರ ತವರು ಕ್ಷೇತ್ರ ಶಿವಮೊಗ್ಗದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಇದೇ ಪ್ರಪ್ರಥಮ ಬಾರಿಗೆ ರೈತ ಮಹಾ ಪಂಚಾಯತ್ ಸಮಾವೇಶ ನಡೆಸುವುದರ ಮೂಲಕ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಂತೆ ಎಲ್ಲಾ ರೈತ, ಪ್ರಗತಿಪರ ಸಂಘಟನೆಗಳು ಒಗ್ಗೂಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿರ್ಣಯ ಕೈಗೊಂಡಿದ್ದು, ನಿರ್ಣಯಗಳನ್ನು ಮಂಡಿಸಿದ್ದಾರೆ. ದೆಹಲಿಯ ಹೋರಾಟದ ಕಿಚ್ಚು ಇದೀಗ ದೇಶದ ಎಲ್ಲೆಡೆ ಹಬ್ಬುತ್ತಿದ್ದು, ಈ ಹೋರಾಟದ ಕಿಚ್ಚಿನ ಬೆಂಕಿಯಲ್ಲಿ ಮೋದಿ ಸರ್ಕಾರ, ಒಂದಲ್ಲ ಒಂದು ದಿನ ಸುಟ್ಟು ಭಸ್ಮವಾಗಲಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ರೈತ ವಿರೋಧಿ ಕಾನೂನಿನ ಮೂಲಕ, ದೇಶದಲ್ಲಿ ಇಬ್ಭಾಗವಾಗಿದ್ದ ರೈತ ಹೋರಾಟಗಾರರು ಮತ್ತು ಸಾಮಾಜಿಕ ಹೋರಾಟಗಾರರು ಇಂದು ಒಂದಾಗಿದ್ದಾರೆ.
Advertisement
ರೈತ ಸಮಾವೇಶದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ರೈತರು ಸೇರಿದಂತೆ, ಜನ ಸಾಮಾನ್ಯರು ಭಾಗವಹಿಸಿದ್ದರು. ಸಮಾವೇಶದ್ದುದ್ದಕ್ಕೂ ಎಲ್ಲಿ ನೋಡಿದಲ್ಲಿ ಹಸಿರು ಶಾಲುಗಳದ್ದೇ, ಕಾರುಬಾರಾಗಿತ್ತು. ಅದೇ ರೀತಿ, ಸಮಾವೇಶದ ಉದ್ಘಾಟನೆಯನ್ನೂ ಕೂಡ ವಿಶೇಷವಾಗಿ ಭತ್ತದ ತೆನೆ ಬಿಡಿಸುವುದರ ಮೂಲಕ ದಕ್ಷಿಣ ಭಾರತದ ರೈತ ಮಹಾ ಪಂಚಾಯತ್ ಸಮಾವೇಶಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಕೇಂದ್ರ ಸರ್ಕಾರದ ಮೋದಿ ಆಡಳಿತ ಮತ್ತು ರೈತರ ವಿರೋಧಿ ನಿಲುವುಗಳನ್ನು ಖಂಡಿಸಲಾಯಿತು. ಈ ವೇಳೆ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್, ಪ್ರಸ್ತುತ ಹಲವಾರು ಯುವಕರು ಭೂಮಿ ಬಿಟ್ಟು ನಿರುದ್ಯೋಗಿಗಳಾಗುತ್ತಿದ್ದಾರೆ. ಬ್ಯಾಂಕ್ ಗಳು ಕೂಡ ಖಾಸಗೀಕರಣಗೊಳ್ಳುತ್ತಿದ್ದು, ಕಿಸಾನ್ ಕ್ರೆಡಿಟ್ ಕಾರ್ಡ್ ಗಳು ವಾಪಾಸ್ ನೀಡಬೇಕಾಗಿದೆ. ದೆಹಲಿ ರೂಪದಲ್ಲಿ ಇಲ್ಲಿಯೂ ಟ್ರ್ಯಾಕ್ಟರ್ ಚಳವಳಿ ನಡೆಸಬೇಕಿದೆ. ರೈತ ಸಮುದಾಯವನ್ನು ಸಂಪೂರ್ಣವಾಗಿ ತುಳಿಯುವ ಕಾಯ್ದೆ ಜಾರಿಗೊಳಿಸಲಾಗುತ್ತಿದೆ ಅಂತಾ ಕೇಂದ್ರದ ವಿರುದ್ಧ ಕಿಡಿಕಾರಿದರು.
ಒಟ್ಟಾರೆ, ಕರ್ನಾಟಕದ ಪಾಲಿಗೆ ಮೊದಲ ಮಹಾಪಂಚಾಯತ್ ಆಗಿದ್ದು, ನಾಳೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನೂರಕ್ಕೂ ಹೆಚ್ಚು ಮಹಾಪಂಚಾಯತ್ ಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಹೋರಾಟದ ನೆಲ ಎಂದೇ ಕರೆಸಿಕೊಳ್ಳುವ ಶಿವಮೊಗ್ಗದಲ್ಲಿ, ಮಹಾ ಪಂಚಾಯತ್ ಗೆ ವೇದಿಕೆ ದಕ್ಷಿಣ ಭಾರತದ ರೈತರ ಕಿಚ್ಚಿಗೆ ಯಾವ ಮಟ್ಟದ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎಂಬುದು ಕಾದು ನೋಡಬೇಕಿದೆ.