– ಸ್ವಯಂ ಪ್ರೇರಿತ ಲಾಕ್‍ಡೌನ್‍ಗೆ ದಿನಸಿ ವರ್ತಕರ ನಿರ್ಧಾರ
ಶಿವಮೊಗ್ಗ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಿದ್ದು, ಸಮುದಾಯಕ್ಕೂ ಹರಡುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ದಿನಸಿ ವರ್ತಕರು ಸೋಮವಾರದಿಂದ ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಿ, ಮಧ್ಯಾಹ್ನದ ನಂತರ ಸ್ವಯಂ ಪ್ರೇರಿತರಾಗಿ ಲಾಕ್‍ಡೌನ್ ಮಾಡಲು ನಿರ್ಧರಿಸಿದ್ದಾರೆ.
ವ್ಯಾಪಾರಿಗಳು, ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಹಾಗೂ ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಸ್ವಯಂ ಪ್ರೇರಿತ ಲಾಕ್‍ಡೌನ್ ನಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು. ಆದರೆ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ ಡೌನ್ ಅನಿವಾರ್ಯವಾಗಿದೆ ಎಂದು ದಿನಸಿ ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ದಿನಸಿ ವರ್ತಕರ ಲಾಕ್‍ಡೌನ್ ನಿರ್ಧಾರವನ್ನು ಸ್ವಾಗತಿಸಿರುವ ಶಿವಮೊಗ್ಗ ಛೇಂಬರ್ ಆಫ್ ಕಾಮರ್ಸ್ ನಮ್ಮ ಅಧೀನದಲ್ಲಿ 28 ಸಂಘಗಳು ಬರುತ್ತವೆ. ಈಗಾಗಲೇ ದಿನಸಿ ವರ್ತಕರು ಸ್ವಯಂ ಪ್ರೇರಿತರಾಗಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ನಮ್ಮ ಸಂಘದಲ್ಲಿ ಸಭೆ ನಡೆಸಿ ಇತರೆ ಎಲ್ಲ ವರ್ತಕರು ಇದಕ್ಕೆ ಬೆಂಬಲ ಸೂಚಿಸಿ, ಆರೋಗ್ಯದ ಹಿತದೃಷ್ಟಿಯಿಂದ ಮಧ್ಯಾಹ್ನದವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸುವಂತೆ ಮನವಿ ಮಾಡುತ್ತೇವೆ ಎಂದು ಛೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ವಾಸುದೇವ್ ತಿಳಿಸಿದ್ದಾರೆ.