ಶಿವಮೊಗ್ಗ: ಕೊರೊನಾ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಮೇಲುಸ್ತುವಾರಿ ನೋಡಿಕೊಳ್ಳಲು ಜಿಲ್ಲೆಯಲ್ಲಿ 24 ಹಿರಿಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳನ್ನು ಒಳಗೊಂಡಂತೆ ಜಿಲ್ಲಾ ಸರ್ವೇಕ್ಷಣಾ ತಂಡವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ರಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ನಡೆದ ಸಮಿತಿ ಸಭೆಯಲ್ಲಿ ತಂಡದ ಸದಸ್ಯರ ಜವಾಬ್ದಾರಿ ಬಗ್ಗೆ ಮಾಹಿತಿಯನ್ನು ನೀಡಿದರು.
ಇದೇ ರೀತಿಯ ಸಮಿತಿಯನ್ನು ತಾಲೂಕು ಮಟ್ಟದಲ್ಲಿ ಸಹ ರಚಿಸಬೇಕು. ಪ್ರತಿ ದಿನ ಸಮಿತಿ ಸಭೆ ನಡೆಸಿ ವರದಿಯನ್ನು ಜಿಲ್ಲಾ ಸಮಿತಿಗೆ ಸಲ್ಲಿಸಬೇಕು. ಎಲ್ಲಾ ತಹಶೀಲ್ದಾರ್ ಗಳನ್ನು ತಾಲೂಕು ಮಟ್ಟದ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ ಎಂದರು.
Advertisement
Advertisement
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಟೈನ್‍ಮೆಂಟ್ ವಲಯದಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆಯನ್ನು ತೀವ್ರಗೊಳಿಸಬೇಕು. ರೋಗ ಲಕ್ಷಣವಿಲ್ಲದ ಕೊರೊನಾ ಪಾಸಿಟಿವ್ ವ್ಯಕ್ತಿಗಳಿಗೆ ಮಾರ್ಗಸೂಚಿ ಪ್ರಕಾರ ಸೌಲಭ್ಯಗಳು ಲಭ್ಯವಿದ್ದರೆ ಮನೆಯಲ್ಲಿಯೇ ಐಸೋಲೇಷನ್‍ಗೆ ಅನುಮತಿ ನೀಡಲಾಗುತ್ತಿದೆ. ಅಂತಹ ವ್ಯಕ್ತಿಗಳ ಆರೋಗ್ಯದ ಮೇಲೆ ಪ್ರತಿದಿನ ನಿಗಾ ಇರಿಸಬೇಕು ಎಂದು ಸೂಚನೆ ನೀಡಿದರು.
Advertisement
ಪ್ರಸ್ತುತ ಲಭ್ಯವಿರುವ ಬೆಡ್‍ಗಳು, ಮುಂದಿನ ಮೂರು ದಿನಗಳಲ್ಲಿ ಲಭ್ಯವಾಗುವ ಬೆಡ್‍ಗಳು, ಆಕ್ಸಿಜನ್, ವೆಂಟಿಲೇಟರ್ ಗಳ ಬಗ್ಗೆ ಪ್ರತಿದಿನ ಮಾಹಿತಿಯನ್ನು ಒದಗಿಸಬೇಕು. ಬೆಡ್‍ಗಳನ್ನು ಒದಗಿಸುವುದರಲ್ಲಿ ಗೊಂದಲಕ್ಕೆ ಅವಕಾಶ ಮಾಡಬಾರದು. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‍ಗಳ ವಿವರಗಳನ್ನು ಪರಿಶೀಲಿಸಿ ಶನಿವಾರದ ಒಳಗಾಗಿ ಮಾಹಿತಿ ನೀಡಬೇಕು ಎಂದರು.
Advertisement
ಶಿಕಾರಿಪುರದ ವಸತಿ ಶಾಲೆಯಲ್ಲಿ 250 ಬೆಡ್‍ಗಳು ಹಾಗೂ ದೇವರ ನರಸೀಪುರ ವಸತಿ ಶಾಲೆಯಲ್ಲಿ 50 ಬೆಡ್‍ಗಳನ್ನು ಸಜ್ಜುಗೊಳಿಸಲಾಗಿದ್ದು, ಕೊರೊನಾ ಕೇರ್ ಸೆಂಟರ್ ಕಾರ್ಯಾರಂಭ ಮಾಡಬಹುದಾಗಿದೆ ಎಂದರು.
ಕೊರೊನಾ ಕೇರ್ ಸೆಂಟರ್ ಗೆ ದಾಖಲಾಗುವವರು ಮನೆಯಿಂದಲೇ ಬೆಡ್‍ಶೀಟ್, ಟವೆಲ್, ಟೂತ್‍ಪೇಸ್ಟ್, ಬ್ರಷ್, ಸಾಬೂನು ಇತ್ಯಾದಿ ಅಗತ್ಯ ವಸ್ತುಗಳನ್ನು ತರಲು ಸೂಚಿಸಬೇಕು. ಮನೆಯಿಂದ ಹಣ್ಣುಹಂಪಲುಗಳನ್ನು ಮಾತ್ರ ತರಿಸಲು ಅವಕಾಶವಿದೆ. ಇತರ ಆಹಾರ ಪದಾರ್ಥ ಮನೆಯಿಂದ ಒದಗಿಸಲು ಅವಕಾಶ ಇರುವುದಿಲ್ಲ. ಕೋವಿಡ್ ವಾರ್ಡ್ ಗಳಲ್ಲಿ ವಿಡಿಯೋ ಚಿತ್ರೀಕರಣ ನಡೆಸುವುದನ್ನು ನಿರ್ಬಂಧಿಸಲಾಗಿದ್ದು, ವಿಡಿಯೋ ಚಿತ್ರೀಕರಣ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಬಿ.ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಉಪಸ್ಥಿತರಿದ್ದರು.