ಮೈಸೂರು: ಐಎಎಸ್ ವರ್ಸಸ್ ಐಎಎಸ್ ಕದನಕ್ಕೆ ಸೋಮವಾರ ಮೆಗಾ ಟಿಸ್ವ್ ಸಿಗುತ್ತಾ? ಸೋಮವಾರದ ಒಳಗೆ ಜಿಲ್ಲಾಧಿಕಾರಿ ವರ್ಗವಾಗದೆ ಇದ್ದರೆ ರಾಜ್ಯ ಸರ್ಕಾರಕ್ಕೆ ಅತಿ ದೊಡ್ಡ ತಲೆ ನೋವು ಶುರುವಾಗುತ್ತಾ? ಇಂತಹ ಪ್ರಶ್ನೆ ಹುಟ್ಟಿಕೊಂಡಿವೆ. ಇದಕ್ಕೆ ಕಾರಣ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೀಡಿದ ಹೇಳಿಕೆ.
ಮೈಸೂರಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಕಿತ್ತಾಟ ತಾರಕಕ್ಕೇರಿದ್ದು, ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಮೈಸೂರು ಡಿಸಿ ತಕ್ಷಣವೇ ವರ್ಗಾವಣೆ ಆಗಬೇಕೆಂದು ನಗರ ಪಾಲಿಕೆ ಸದಸ್ಯರು ಪಟ್ಟುಹಿಡಿದಿದ್ದಾರೆ. ಒಂದು ವೇಳೆ ಡಿಸಿ ರೋಹಿಣಿ ಸಿಂಧೂರಿ ಸೋಮವಾರದೊಳಗೆ ವರ್ಗಾವಣೆ ಆಗದಿದ್ರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಎಂಬ ಪ್ರಶ್ನೆ ಹುಟ್ಟಿದೆ.
ಮೈಸೂರು ಡಿಸಿ ಸಿಂಧೂರಿ ಕಾರ್ಯವೈಖರಿ ವಿರುದ್ಧ ಸಿಡಿದೆದ್ದಿರುವ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ರು. ಸರ್ಕಾರ ಶಿಲ್ಪಾ ನಾಗ್ ಅವರ ಮನವೊಲಿಕೆಗೆ ಯತ್ನಿಸುತ್ತಿರುವ ಸಂದರ್ಭದಲ್ಲಿ ಹೊಸ ಬೆಳವಣಿಗೆ ಸಂಚಲನಕ್ಕೆ ಕಾರಣವಾಗಿದೆ. ಡಿಸಿ ವರ್ಗಾವಣೆಗೆ ಆಗ್ರಹಿಸಿ ಪಾಲಿಕೆ ಸದಸ್ಯರು ಪ್ರತಿಭಟನೆ ನಡೆಸ್ತಿದ್ದ ಸ್ಥಳಕ್ಕೆ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನನಗೆ ಎರಡು ದಿನ ಸಮಯ ಕೊಡಿ. ಅಷ್ಟರಳೊಗೆ ಸಮಸ್ಯೆ ಬಗೆಹರಿಯದೆ ಇದ್ದರೆ ನನ್ನ ತೀರ್ಮಾನ ಹೇಳುತ್ತೇನೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿಸಲು ಆಗದ ಮೇಲೆ ನನಗೇಕೆ ಬೇಕು ಉಸ್ತುವಾರಿ ಸ್ಥಾನ ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವ ಎಸ್‍ಟಿ ಸೋಮಶೇಖರ್ ಅವರ ಈ ಮಾತುಗಳು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಡಿಸಿ ವರ್ಗಾವಣೆ ಆಗದೆ ಇದ್ದರೆ ಎಸ್.ಟಿ. ಸೋಮಶೇಖರ್ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿಯೇ ಮುಂದವರಿದಲ್ಲಿ ಮೈಸೂರು ಉಸ್ತುವಾರಿ ಸಚಿವ ಸ್ಥಾನ ತ್ಯಜೀಸೋಕೆ ಎಸ್.ಟಿ.ಸೋಮಶೇಖರ್ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದೇ ವೇಳೆ ಆಯುಕ್ತೆ ಶಿಲ್ಪಾ ನಾಗ್ ಬೆಂಬಲಕ್ಕೆ ಎಸ್‍ಟಿ ಸೋಮಶೇಖರ್ ಗಟ್ಟಿಯಾಗಿ ನಿಂತಿದ್ದಾರೆ. ಇದನ್ನೂ ಓದಿ:ಮೇಡಂ ರಾಜೀನಾಮೆ ನೀಡಬೇಡಿ ಎಂದು ಶಿಲ್ಪಾ ನಾಗ್ ಕಾಲು ಹಿಡಿದ ಭದ್ರತಾ ಸಿಬ್ಬಂದಿ
ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸುವುದಿಲ್ಲ. ಅವರ ಸೇವೆ ಮೈಸೂರು ನಗರಕ್ಕೆ ಅಗತ್ಯವಾಗಿದೆ. ಅವರು ಸಮರ್ಥ ಅಧಿಕಾರಿ ಅವರ ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡ್ತೇನೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಇದನ್ನೂ ಓದಿ: ಅಧಿಕಾರಿಗಳ ಮಧ್ಯೆ ಸಂಘರ್ಷ – ಎಲ್ಲವನ್ನೂ ಚಾಮುಂಡಿ ತಾಯಿ ನೋಡುತ್ತಿದ್ದಾಳೆ ಎಂದ ಎಸ್‍ಟಿಎಸ್
ಸೋಮವಾರ ಹೈಕೋರ್ಟ್ ನಲ್ಲಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿ ನೇಮಕ ಪ್ರಶ್ನಿಸಿ ದಾಖಲಾದ ಅರ್ಜಿಯ ಅಂತಿಮ ವಿಚಾರಣೆ ಇದೆ. ಕೋರ್ಟ್ ಒಂದು ವೇಳೆ ರೋಹಿಣಿ ಸಿಂಧೂರಿ ವಿರುದ್ದದ ಅರ್ಜಿಯನ್ನು ಎತ್ತಿ ಹಿಡಿದರೆ ಎಲ್ಲಾ ಸಮಸ್ಯೆಗೂ ಒಂದೇ ಕ್ಷಣದಲ್ಲಿ ಪರಿಹಾರ ಸಿಗುತ್ತೆ. ಅರ್ಜಿಯ ತೀರ್ಪು ರೋಹಿಣಿ ಸಿಂಧೂರಿ ಪರವಾಗಿದ್ರೆ ಮತ್ತೊಂದು ಡ್ರಾಮಾ ಶುರುವಾಗುತ್ತೆ. ಇದನ್ನೂ ಓದಿ: 12 ಕೋಟಿ ಸಿಎಸ್‍ಆರ್ ಫಂಡ್ ಖರ್ಚಿನ ಮಾಹಿತಿ ಕೇಳಿದ್ದೆ ಅಷ್ಟೇ – ರೋಹಿಣಿ ಸಿಂಧೂರಿ
ಈ ಎಲ್ಲಾ ಲೆಕ್ಕಾಚಾರದ ಮೇಲೆಯೆ ಸಚಿವ ಎಸ್.ಟಿ. ಸೋಮಶೇಖರ್ ತಮ್ಮದೆ ಸರ್ಕಾರದ ಮೇಲೆ ಒತ್ತಡದ ಹೇರುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇದು ಐಎಎಸ್ ವರ್ಸಸ್ ಐಎಎಸ್ ಕದನಕ್ಕಿಂತ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ಸೋಮಶೇಖರ್ ತ್ಯಜಿಸುವ ವಿಚಾರ ದೊಡ್ಡ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಬಹುದು. ಎಸ್‍ಟಿ ಸೋಮಶೇಖರ್ ಬಳಗ ಹೇರುತ್ತಿರುವ ಒತ್ತಡಕ್ಕೆ ಸಿಎಂ ಯಡಿಯೂರಪ್ಪ ತಲೆ ಬಾಗ್ತಾರಾ..? ರೋಹಿಣಿ ಸಿಂಧೂರಿಯನ್ನು ವರ್ಗಾ ಮಾಡ್ತಾರಾ ಕಾದು ನೋಡಬೇಕು. ಇದನ್ನೂ ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್