ಬೆಂಗಳೂರು: ಶಿರಾ ಉಪಚುನಾವಣೆ ಕ್ಷೇತ್ರ ರಂಗೇರುತ್ತಿದ್ದು, ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಫೈನಲ್ ಮಾಡಿ ದಿವಂಗತ ಮಾಜಿ ಶಾಸಕ ಸತ್ಯನಾರಾಯಣ್ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ಘೋಷಿಸಿದೆ.
ನವೆಂಬರ್ 3 ರಂದು ತುಮಕೂರಿನ ಶಿರಾ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಅವರು ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಜೆಡಿಎಸ್ ಶಾಸಕ ಬಿ ಸತ್ಯನಾರಾಯಣ ಅವರ ನಿಧನದಿಂದಾಗಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನ ಈಗಾಗಲೇ ಫೈನಲ್ ಮಾಡಿದೆ.
ದಿವಂಗತ ಮಾಜಿ ಶಾಸಕ ಸತ್ಯನಾರಾಯಣ್ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಮೂಲಕ ಗೆಲುವಿನ ಲೆಕ್ಕಾಚಾರವನ್ನು ಮಾಡಿದೆ. ಈ ಮೊದಲು ಸತ್ಯನಾರಾಯಣ್ ಅವರ ಮಗ ಸತ್ಯ ಪ್ರಕಾಶ್‍ಗೆ ಟಿಕೆಟ್ ನೀಡುತ್ತಾರೆ ಎನ್ನಲಾಗಿತ್ತು.
ಕಳೆದ ಚುನಾವಣೆಯಲ್ಲಿ ಗೆಲುವು ಪಡೆದಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ನಡೆದಿದ್ದರೇ, ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇತ್ತ ಶಿರಾ ಕ್ಷೇತ್ರದೊಂದಿಗೆ ಆರ್.ಆರ್ ನಗರ ಉಪಚುನಾವಣೆಯೂ ನ.3 ರಂದು ನಡೆಯಲಿದ್ದು, ಜೆಡಿಎಸ್ ಪಕ್ಷ ಇನ್ನಷ್ಟೇ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ.