ಬೆಳಗಾವಿ: ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ವಾತಾವರಣ ಕಂಡು ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇತ್ತೀಚೆಗೆ ನಿಧನರಾದ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮನೆಗೆ ಇಂದು ಭೇಟಿ ನೀಡಿರುವ ನಳಿನ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಎಲ್ಲವನ್ನೂ ಗಮನಿಸಿ ಯೋಚನೆ ಮಾಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತದೆ. ನಾಲ್ಕೈದು ಹೆಸರುಗಳು ಕೇಳಿ ಬಂದಿದ್ದು, ಪರಿಶೀಲನೆ ಮಾಡುತ್ತಿದ್ದೇವೆ. ನಮ್ಮ ಕೆಲಸ ಕಾರ್ಯ ಆರಂಭವಾಗಿವೆ. ಶಿರಾದಲ್ಲಿ ಬಿಜೆಪಿ ಗೆಲುವಿನ ವಾತಾವರಣ ಕಂಡು ಬರುತ್ತಿದೆ. ಹತ್ತರಿಂದ ಹದಿನೈದು ದಿನಗಳಲ್ಲಿ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದರು.
ಇದೇ ವೇಳೆ ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹೋರಾಟ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ. ರೈತರನ್ನ ಎತ್ತಿಕಟ್ಟಿ ರಾಷ್ಟ್ರದಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜಕಾರಣಕ್ಕೋಸ್ಕರ ದ್ವೇಷ ಹುಟ್ಟಿಸುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ಕಿಡಿಕಾರಿದರು.
ಚುನಾವಣೆ ಪ್ರಣಾಳಿಕೆಯಲ್ಲೇ ಈ ಎಲ್ಲ ಕಾಯ್ದೆಗಳನ್ನ ತರಬೇಕು ಅಂತ ಹೇಳಿತ್ತು. ಅತ್ಯುತ್ತಮವಾಗಿರುವ ರೈತರ ಪರವಾಗಿರುವ ಕಾಯ್ದೆ ಇದು. ಹೋರಾಟ ಮಾಡುವವರ ಬೇಡಿಕೆ ರೈತರಿಗೆ ನೇರವಾಗಿರುವ ಮಾರುಕಟ್ಟೆ ಕೊಡಿ ಅಂತ ಇತ್ತು. ಅವರ ಬೇಡಿಕೆ ಅಂತೆ ಸರ್ಕಾರ ಕಾಯ್ದೆ ಮಾಡಿದೆ. ರೈತರಿಗೆ ಮನದಟ್ಟು ಮಾಡುವ ಕೆಲಸ ಪಕ್ಷದಿಂದ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಇದರ ಮಧ್ಯೆ ಬೆಂಕಿ ಹಾಕಿ ಬೆಳೆ ಬೇಯಿಸಿಕೊಳ್ಳುವ ಮಾಡದಿರಲಿ. ಕಾಂಗ್ರೆಸ್ ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಾಕುವ ಕೆಲಸ, ಅಧಿಕಾರ ಇದ್ದಾಗ ಭ್ರಷ್ಟಾಚಾರ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.
ಸುರೇಶ್ ಅಂಗಡಿ ಮನೆಗೆ ಭೇಟಿ ವೇಳೆ ನಳಿನ್ ಗೆ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಸ್ಥಳೀಯ ನಾಯಕರು ಸಾಥ್ ನೀಡಿದರು.