ಶಿರಸಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ- 20 ಕೊರೊನಾ ಸೋಂಕಿತರ ಸ್ಥಳಾಂತರ

Public TV
1 Min Read
oxygen kwr

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ದಾಖಲಾದ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಸುವ ಘಟಕದಲ್ಲಿ ಸೋರಿಕೆ ಉಂಟಾಗಿ ಕೋವಿಡ್ ರೋಗಿಗಳನ್ನು ಸ್ಥಳಾಂತರಿಸಿದ ಘಟನೆ ಇಂದು ವರದಿಯಾಗಿದೆ.

oxygen kwr 1

ಕೋವಿಡ್ ವಾರ್ಡ್‍ನ ಪಕ್ಕದಲ್ಲಿ ಆಕ್ಸಿಜನ್ ಸಂಗ್ರಹಾಗಾರವಿದ್ದು, ಇಲ್ಲಿಂದ ಪೈಪ್ ಲೈನ್ ಮೂಲಕ ವಾರ್ಡ್‍ಗೆ ಆಕ್ಸಿಜನ್ ಪೂರೈಕೆ ಆಗುತ್ತಿತ್ತು. ಆದರೆ ಇಂದು ನಸುಕಿನ ಜಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಆಗದಿದ್ದಾಗ ಹೋಗಿ ಪರಿಶೀಲಿಸಿದಾಗ ಆಕ್ಸಿಜನ್ ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ.

oxygen 5

ಬಳಿಕ ಕೋವಿಡ್ ವಾರ್ಡ್‍ನಲ್ಲಿ ದಾಖಲಾಗಿದ್ದ ಒಟ್ಟು 20 ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. 20 ಸೋಂಕಿತರ ಪೈಕಿ 6 ಮಂದಿ ಗಂಭೀರ ಸ್ಥಿತಿಯಲ್ಲಿದ್ದರು ಅವರನ್ನು ಕೂಡಲೇ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಅಗತ್ಯವಿರುವ ಕಾರಣ ಸಿದ್ಧಾಪುರ, ಮುಂಡಗೋಡು, ಯಲ್ಲಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಕಾರವಾರ ದಿಂದ ನೌಕಾದಳದ ತಂತ್ರಜ್ಞರನ್ನು ಕರೆಯಿಸಲಾಗಿದ್ದು ದುರಸ್ಥಿ ಕಾರ್ಯ ನಡೆಯುತ್ತಿದ್ದು, ಸ್ಥಳಕ್ಕೆ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ಡಿವೈಎಸ್ಪಿ ರವಿ ನಾಯ್ಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಎಸ್‍ಐ ರಾಜಕುಮಾರ್ ಮೊಕ್ಕಾಂ ಹೊಡಿದ್ದಾರೆ.

oxygen 6

ಅರ್ಧಕ್ಕಿಂತ ಹೆಚ್ಚು ಆಕ್ಸಿಜನ್ ಖಾಲಿ
ಇಂದು ಮುಂಜಾನೆಯಿಂದಲೇ ಆಕ್ಸಿಜನ್ ಸೋರಿಕೆ ಆಗುತ್ತಿತ್ತು. ಆರು ಜನ ಗಂಭೀರ ಸ್ಥಿತಿಯಲ್ಲಿದ್ದ ಸೋಂಕಿತರಿಗೆ ಮಾತ್ರ ಆಕ್ಸಿಜನ್ ಪೂರೈಕೆ ಮಾಡಲಾಗುತಿತ್ತು. ಆದರೆ ನಿರೀಕ್ಷಿತ ಆಕ್ಸಿಜನ್ ಸೋಂಕಿತರಿಗೆ ಸಿಗದಿರುವುದನ್ನು ಗಮನಿಸಿದ ಸಿಬ್ಬಂದಿಗಳು ಆಡಳಿತಾಧಿಕಾರಿ ಗಮನಕ್ಕೆ ತಂದಿದ್ದಾರೆ. ಈ ವೇಳೆ ಸಂಗ್ರಹವಿದ್ದ ಆಕ್ಸಿಜನ್ ಸಿಲೆಂಡರ್ ನಲ್ಲಿ 50% ಆಕ್ಸಿಜನ್ ಸೋರಿಕೆಯಿಂದ ಖಾಲಿಯಾಗಿದೆ. ತಕ್ಷಣ ಕಾರವಾರದ ನೌಕಾದಳದ ತಂತ್ರಜ್ಞರಿಗೆ ಮಾಹಿತಿ ನೀಡಿ ಸಿಲೆಂಡರ್‍ ನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಅಲ್ಪ ಪ್ರಮಾಣದ ಆಕ್ಸಿಜನ್ ಉಳಿದಿದೆ. ಆಕ್ಸಿಜನ್ ಅವಶ್ಯಕತೆ ಇದ್ದ 6 ಜನ ಸೋಂಕಿತರನ್ನು ತಕ್ಷಣ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದರಿಂದ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಸೋಂಕಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share This Article