– ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ
ಹಾಸನ: ಕೊರೊನಾದಿಂದ ಉಂಟಾದ ಆರ್ಥಿಕ ಸಂಕಷ್ಟ ಪೋಷಕರನ್ನು ದಿಕ್ಕೆಡಿಸಿದ್ದು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸುವ ನಿರ್ಧಾರಕ್ಕೆ ಬರುವಂತೆ ಮಾಡಿದೆ. ಆದರೆ ಸರ್ಕಾರಿ ಶಾಲೆಗಳ ದುಸ್ಥಿತಿ ಈಗ ಪೋಷಕರನ್ನು ಮತ್ತಷ್ಟು ಆತಂಕ್ಕೀಡು ಮಾಡುತ್ತಿದೆ.
ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ನೇರ್ಲಿಗೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 95 ವರ್ಷಕ್ಕೂ ಹೆಚ್ಚು ಹಳೆಯದಾದ ಈ ಶಾಲೆಯು ಶಿಥಿಲವಾಗಿದ್ದು ಯಾವಾಗ ಬೇಕಾದರೂ ಬಿದ್ದು ಹೋಗುವ ಹಂತದಲ್ಲಿದೆ. ಮಳೆ ಬಂದಾಗ ಶಾಲೆ ಎಲ್ಲೆಂದರಲ್ಲಿ ಸೋರುತ್ತೆ. ಇಂತಹ ಶಾಲೆಯಲ್ಲಿ ಅನಿವಾರ್ಯವಾಗಿ ಜೀವ ಕೈಯಲ್ಲಿ ಹಿಡಿದು ಮಕ್ಕಳು ಪಾಠ ಕೇಳಬೇಕಾದ ದುಸ್ಥಿತಿ ಇದೆ.
Advertisement
Advertisement
ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನ ಆಗುತ್ತಿಲ್ಲ ಅನ್ನೋದು ಗ್ರಾಮಸ್ಥರ ಅಳಲಾಗಿದೆ. ಕೊರೊನಾ ಸಮಯದಲ್ಲಿ ಶಾಲೆಯನ್ನು ತೆರೆದು ಪಾಠ ಆರಂಭಿಸಿದರೆ ಮಕ್ಕಳಿಗೆ ರೋಗ ಹರಡೋ ಸಾಧ್ಯತೆ ಹೆಚ್ಚಾಗಿ ಅವರ ಪ್ರಾಣಕ್ಕೆ ಸಂಕಟವಾಗಬಹುದೆಂಬ ದುಗುಡದಲ್ಲಿ ಸರ್ಕಾರ ಇದೆ. ಆದರೆ ಈ ದುಸ್ಥಿತಿಯಲ್ಲಿರುವ ಕಟ್ಟಡವೇ ಮಕ್ಕಳ ಜೀವಕ್ಕೆ ಕಂಟಕವಾಗಬಹುದು. ಈ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.
Advertisement
Advertisement
ಮಕ್ಕಳ ಆರೋಗ್ಯದ ಕಾರಣಕ್ಕಾಗಿ ಕೊರೊನಾ ಸಮಯದಲ್ಲಿ ಶಾಲೆ ತೆರೆಯಬೇಕೋ ಬೇಡವೋ ಎಂದು ಚಿಂತಿಸುವ ಸರ್ಕಾರಕ್ಕೆ, ಶಿಥಿಲಗೊಂಡಿರುವ ಕಟ್ಟಡಗಳು ಕೂಡ ಮಕ್ಕಳ ಪ್ರಾಣಕ್ಕೆ ಕಂಟಕವಾಗಬಹುದು ಎಂಬ ಚಿಂತನೆ ಯಾಕೆ ಬಂದಿಲ್ಲ ಎಂದು ಜನರ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ಸರ್ಕಾರ ಗಮನಹರಿಸಿ ನೂತನ ಕಟ್ಟಡದ ನಿರ್ಮಿಸಿಕೊಡುವ ಮೂಲಕ ಸಮಸ್ಯೆ ನಿವಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.