ಬೆಂಗಳೂರು: ನಮ್ಮ ವಿದ್ಯಾರ್ಥಿಗಳ ಹಿತ ಕಾಯುತ್ತಿರುವ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕ-ಶಿಕ್ಷಕೇತರ ಸಮುದಾಯಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್‍ರವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಕೋವಿಡ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ ಶಿಕ್ಷಣ ಕ್ಷೇತ್ರವೂ ಪ್ರಧಾನವಾದ ಕ್ಷೇತ್ರವಾಗಿದೆ. ಸರ್ಕಾರ ವಿಧಿಸಿದ ಲಾಕ್ ಡೌನ್ ರಾಜ್ಯಾದ್ಯಂತ ಇರುವ ಸಾವಿರಾರು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬಿಸಿದ್ದ ಹಲವು ವರ್ಗಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದ ಕಾರಣ, ಪೋಷಕರು ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ನಿರೀಕ್ಷಿತ ರೀತಿಯಲ್ಲಿ ಆಸಕ್ತಿ ತೋರಲಿಲ್ಲ. ಇದೂ ಕೂಡಾ ಬಹು ವಿಧದ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಯಿತು.
ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕಾಯಕದಲ್ಲಿ ಸಾವಿರಾರು ವಿದ್ಯಾ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿವೆ. ಈ ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ಲಕ್ಷಾಂತರ (ಅಂದಾಜು ಎರಡು ಲಕ್ಷ) ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾ ಸಂಸ್ಥೆಗಳ ಆಡಳಿತ ವರ್ಗಗಳು ನೀಡುವ ವೇತನ-ಭತ್ಯೆಗಳನ್ನು ಸಂತೃಪ್ತಿಯಿಂದ ಸ್ವೀಕರಿಸಿ ಮಕ್ಕಳ ಭವಿಷ್ಯವನ್ನ ಕಾಯುತ್ತಿದ್ದಾರೆ.
ಆದರೆ, ಖಾಸಗಿ ಶಾಲೆಗಳಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಬಜೆಟ್ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಧಕ, ಬೋಧಕೇತರ ಸಿಬ್ಬಂದಿ ಮುನ್ನೆಲೆಗೆ ಬಾರದ, ಅತಿಯಾದ ಸಮಸ್ಯೆಗೆ ಸಿಲುಕಿರುವ ಸಮುದಾಯದವರಾಗಿದ್ದಾರೆ. ಪೋಷಕ-ಶಾಲೆಗಳ ನಡುವಿನ ಸಮಸ್ಯೆಗಳ ನೇರ ಪರಿಣಾಮ ಈ ಸಮುದಾಯದ ಮೇಲಾಗಿದೆ. ಅಸಂಖ್ಯ ಶಿಕ್ಷಕರು, ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿದ್ದಾರೆ. ಹಣ್ಣು ತರಕಾರಿ ಮಾಡಿದ್ದಾರೆ. ಇದನ್ನು ನಾವು ಹಲವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಕೇಳಿದ್ದೇವೆ. ಅವರ ನೆರವಿಗೆ ಧಾವಿಸುವುದೂ ಸಹ ಸರ್ಕಾರದ ಜವಾಬ್ದಾರಿಯಾಗಿದೆ.
ಶಿಕ್ಷಣದಂತಹ ಪವಿತ್ರ ವೃತ್ತಿಯನ್ನು ಕೈಗೆತ್ತಿಕೊಂಡ ಇಂತಹ ಶಿಕ್ಷಕ ಸಮುದಾಯಕ್ಕೆ ನಾಗರಿಕ ಸಮಾಜದ ಪ್ರತಿಕ್ರಿಯೆ ತನ್ನದೇ ಆದ ದೂರಗಾಮಿ, ನಕಾರಾತ್ಮಕವಾದ ಪರಿಣಾಮವನ್ನು ಬೀರಬಲ್ಲುದು. ಮುನ್ನೆಲೆಗೆ ಬಾರದ ಹಾಗೂ ತಮ್ಮ ಆಯ್ಕೆಯ ಬೌದ್ಧಿಕ ಕ್ಷೇತ್ರ ಕಲ್ಪಿಸುವ ಸಾಮಾಜಿಕ ಸಂಕೋಚದ ಕಾರಣ, ಈ ವರ್ಗ ಗದ್ದಲದ ಹೋರಾಟಕ್ಕೂ ಮುಂದಾಗಿಲ್ಲ.
ಆದರೆ, ಈ ಸಮುದಾಯ ತೀವ್ರ ಆರ್ಥಿಕ-ಭೌತಿಕ ಸಂಕಷ್ಟಗಳನ್ನು ಅನುಭವಿಸುತ್ತಿರುವುದು ಸತ್ಯ. ಹಾಗಾಗಿ ಇಂತಹ ಸಂದರ್ಭದಲ್ಲಿ ತಾವು ಈ ವರ್ಗದ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕಾದ ತುರ್ತು ಅವಶ್ಯಕತೆ ಇರುತ್ತದೆ. ಈ ವರ್ಗಕ್ಕೆ ನೀಡುವ ಸಹಕಾರವು ನಮ್ಮ ಮಕ್ಕಳ ಭವಿಷ್ಯ ಕಾಯುವಂತಹ ನಿರ್ಣಯವಾಗುತ್ತದೆ. ಆದ ಕಾರಣ, ದಯವಿಟ್ಟು, ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ, ಬಜೆಟ್ ಅನುದಾನರಹಿತ ಶಾಲೆ ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ತಾವು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಈ ಸಮುದಾಯಕ್ಕೆ ವಿಶ್ವಾಸ ತುಂಬಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ.