ಬಳ್ಳಾರಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಸುರೇಶ್ ಕುಮಾರ್ ಅವರು ಇಂದು ಶಿಕ್ಷಕರ ವಿರುದ್ಧ ಗರಂ ಆದ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆಗೆ ಆಗಮಿಸಿದ ಸುರೇಶ್ ಕುಮಾರ್ ಅವರನ್ನು ಜಿಲ್ಲಾಧಿಕಾರಿ ಪುಸ್ತಕ ಕೊಟ್ಟು ಬರಮಾಡಿಕೊಂಡರು. ಬಳಿಕ ಸ್ಥಳೀಯ ಕೆಲ ಶಿಕ್ಷಕರು ಹಾರ ಹಾಕಿ ಶಾಲು ಹೊದಿಸಿ ಬರಮಾಡಿಕೊಳ್ಳಲು ಮುಂದಾದರು. ಆಗ ಇದೆಲ್ಲ ಬೇಡ ಈಗ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಎಂದು ತಿಳಿ ಹೇಳಿದರು.
ಆದರೆ ಕೆಲ ಶಿಕ್ಷಕರು ಮತ್ತೆ ಶಾಲು ಹೊದಿಸಲು ಮುಂದಾದರು. ಆಗ ಮತ್ತೆ ಬೇಡಪ್ಪಾ ಇದೆಲ್ಲ ನನಗೆ ಇಷ್ಟ ಆಗಲ್ಲ ಎಂದು ಗದರಿದ್ರು. ಸಚಿವರ ಮಾತು ಕೇಳದ ಶಿಕ್ಷಕರು ಮಾತ್ರ ಶಾಲು ಹಾಕಲು ಮುಂದಾದರು. ಆಗ ಸಚಿವರಿಗೆ ಕೋಪ ನೆತ್ತಿಗೆ ಏರಿದ್ದು, ಒಮ್ಮೆ ಹೇಳಿದ್ರೆ ಅರ್ಥ ಮಾಡಿಕೊಳ್ಳ ಬೇಕು ನೀವು ಪಾಠ ಮಾಡುವ ಶಿಕ್ಷಕರು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ತಿಳಿ ಹೇಳಬೇಕು. ಆದರೆ ನೀವೂ ಹೀಗೆ ಮಾಡಿದ್ರೆ ಹೇಗೆ. ಒಮ್ಮೆ ಹೇಳಿದರೆ ಅರ್ಥ ಆಗಬೇಕು. ನನಗೆ ಇದೆಲ್ಲ ಇಷ್ಟ ಆಗಲ್ಲ ಎಂದು ಗದರಿ ಸಭೆಗೆ ತೆರಳಿದರು.