-ಮನೆಯ ಮುಂದೆ ಕುಳಿತಿದ್ದ ಶಿಕ್ಷಕ
-ಗ್ರಾಮದಲ್ಲಿ ನೀರವ ಮೌನ
ಲಕ್ನೋ: ಶಿಕ್ಷಕರೊಬ್ಬರನ್ನ ಗುಂಡಿಕ್ಕಿ ಕೊಂದ ಅಪರಿಚಿತನನ್ನ ಗ್ರಾಮಸ್ಥರು ಥಳಿಸಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದ ರಾಂಪುರ ಬಂಗಾರಾ ಗ್ರಾಮದಲ್ಲಿ ನಡೆದಿದೆ.
ಸುಧೀರ್ ಸಿಂಗ್ ಕೊಲೆಯಾದ ಶಿಕ್ಷಕ. ಇಂದು ಬೆಳಗ್ಗೆ ಶಿಕ್ಷಕ ಸುಧೀರ್ ಸಿಂಗ್ ಮನೆಯ ಮುಂದೆ ಕುಳಿತಿದ್ದರು. ಈ ವೇಳೆ ಗೊರಖ್‍ಪುರ ಮೂಲದ ಓರ್ವ ಸುಧೀರ್ ಸಿಂಗ್ ಅವರ ಮೇಲೆ ಫೈರಿಂಗ್ ಮಾಡಿದ್ದಾನೆ. ಗುಂಡಿನ ಸದ್ದು ಕೇಳಿ ಹೊರ ಬಂದ ಗ್ರಾಮಸ್ಥರು ಆರೋಪಿಯನ್ನ ಹಿಡಿದಿದ್ದಾರೆ.
ಗುಂಡೇಟು ತಗುಲಿದ ಶಿಕ್ಷಕ ಸುಧೀರ್ ಸಿಂಗ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕೋಲುಗಳಿಂದ ಆರೋಪಿಯನ್ನ ಥಳಿಸಿದ್ದಾರೆ. ಥಳಿತಕ್ಕೊಳಗಾದ ಆರೋಪಿ ಸಹ ಸಾವನ್ನಪ್ಪಿದ್ದಾನೆ. ಸದ್ಯ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಗ್ರಾಮಸ್ಥರು ಎರಡು ಸಾವುಗಳಿಂದ ಆತಂಕದಲ್ಲಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಶಿಕ್ಷಕ ಸುಧೀರ್ ಸಿಂಗ್ ಮೇಲೆ ಫೈರಿಂಗ್ ಮಾಡಿದ ಗೊರಖ್‍ಪುರ ಮೂಲದ ವ್ಯಕ್ತಿ ಇಂದು ಬೆಳಗ್ಗೆ ರಾಂಪುರ ಬಂಗಾರಾ ಗ್ರಾಮಕ್ಕೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದ್ರೆ ಸುಧೀರ್ ಸಿಂಗ್ ಮೇಲೆ ಏಕೆ ಗುಂಡಿನ ದಾಳಿ ನಡೆಸಿದ್ದ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಗ್ರಾಮಸ್ಥರಿಂದ ಥಳಿತಕ್ಕೊಳಗಾದ ಆರೋಪಿ ಸಹ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.