ನವದೆಹಲಿ: ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೆ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಶಾಹೀನ್ ಬಾಗ್‍ನಲ್ಲಿ ನಡೆದ ಪೌರತ್ವ ತಿದ್ದು ಪಡಿ ಕಾಯ್ದೆ(ಸಿಎಎ) ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕಾ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಕೋರ್ಟ್ ಇಂದು ಆದೇಶ ಪ್ರಕಟಿಸಿದೆ.
Advertisement
Advertisement
ಆದೇಶದಲ್ಲಿ ಏನಿದೆ?
ಅನಿರ್ದಿಷ್ಟಾವಧಿಗೆ ಯಾವುದೇ ವ್ಯಕ್ತಿ ಅಥವಾ ಗುಂಪು ಸಾರ್ವಜನಿಕಾ ಸ್ಥಳಗಳನ್ನು ಬಂದ್ ಮಾಡುವಂತಿಲ್ಲ. ಈ ರೀತಿ ಮಾಡಿದ್ದಲ್ಲಿ ಅಧಿಕಾರಿಗಳು ಪ್ರತಿಭಟನೆಯನ್ನು ತೆರವು ಮಾಡಬೇಕು. ಪ್ರತಿಭಟನೆಗಳು ನಿರ್ಧಿಷ್ಟ ಜಾಗದಲ್ಲಿ ನಡೆಯಬೇಕು.
Advertisement
ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕಾ ಸ್ಥಳ ಅಥವಾ ರಸ್ತೆಯನ್ನು ಬಂದ್ ಮಾಡಿದ್ದಲ್ಲಿ ಭಾರೀ ಸಂಖ್ಯೆಯ ಜನರಿಗೆ ಸಮಸ್ಯೆಯಾಗುತ್ತದೆ. ಇದು ಆ ಜನರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಶಾಂತ ರೀತಿಯ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೆ ಇದೆ. ಸಂವಿಧಾನವೇ ಈ ಹಕ್ಕನ್ನು ನೀಡಿದೆ.
Advertisement
ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಶಾಹೀನ್ ಬಾಗ್ ಮಾರುಕಟ್ಟೆ ಸಂಘಟನೆಯ ಅಧ್ಯಕ್ಷ ಡಾ. ನಾಸೀರ್, ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಪ್ರತಿಭಟನೆಯಿಂದ 200ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಬೇಕಾಯಿತು. 2 ಸಾವಿರ ಕೆಲಸಗಾರರು ಕೆಲಸ ಕಳೆದುಕೊಳ್ಳಬೇಕಾಯಿತು. ಈ ಅಂಗಡಿಗಳಲ್ಲಿ ಬ್ರಾಂಡ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಪ್ರತಿಭಟನೆಯಿಂದ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?
ಸಿಎಎ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಶಾಹೀನ್ ಬಾಗ್‍ನಲ್ಲಿ 2019ರ ಡಿಸೆಂಬರ್ 14 ರಿಂದ ಪ್ರತಿಭಟನೆ ಆರಂಭವಾಗಿತ್ತು. ಈ ನಡುವೆ ಕೊರೊನಾ ಬಂದ ಕಾರಣ ದೇಶವ್ಯಾಪಿ ಮಾ.22 ರಿಂದ ಲಾಕ್‍ಡೌನ್ ಘೋಷಣೆಯಾಗಿತ್ತು. ಲಾಕ್‍ಡೌನ್ ಘೋಷಣೆಯಾಗಿದ್ದರೂ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿದಿತ್ತು.
ಮಾ.24ರಂದು ದೆಹಲಿ ಪೊಲೀಸರು ಜೆಸಿಬಿ ಮೂಲಕ ಸ್ಥಳವನ್ನು ತೆರವುಗೊಳಿಸಿದ್ದರು. ಪೊಲೀಸರು ಸೆಕ್ಷನ್ 144 ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ 6 ಮಹಿಳೆಯರು ಮತ್ತು 3 ಪುರುಷರನ್ನು ಶಾಹೀನ್ ಬಾಗ್‍ನಿಂದ ವಶಕ್ಕೆ ಪಡೆದಿದ್ದರು. ಈ ಮೂಲಕ 101 ದಿನಗಳ ಪ್ರತಿಭಟನೆ ಮುಕ್ತಾಯಗೊಂಡಿತ್ತು. ಸಾರ್ವಜನಿಕಾ ಸ್ಥಳವನ್ನು ಪ್ರತಿಭಟನಾ ಹೋರಾಟಕ್ಕೆ ಬಳಸಿದ್ದನ್ನು ಪ್ರಶ್ನಿಸಿ ಹಲವು ಮಂದಿ ಪಿಐಎಲ್ ಸಲ್ಲಿಸಿದ್ದರು.