– ಹಲವು ಬೇಡಿಕೆ ಈಡೇರಿಸುವಂತೆ ಪತ್ರದಲ್ಲಿ ಮನವಿ
ಮಡಿಕೇರಿ: ಆರನೇ ವೇತನ ಜಾರಿಗೊಳಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಕೊಡಗಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಸಾರಿಗೆ ನೌಕರರು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಪತ್ರ ನೀಡಿದರು.
Advertisement
ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಗ್ಗೆಯಿಂದಲೇ ಬಸ್ಸುಗಳು ಮಡಿಕೇರಿಯ ಡಿಪೋ ಬಿಟ್ಟು ರಸ್ತೆಗೆ ಇಳಿಯಲಿಲ್ಲ. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಖಾಸಗಿ ಬಸ್ ಮತ್ತು ಕ್ಯಾಬ್ ಗಳು ತಮ್ಮ ಸೇವೆ ಆರಂಭಿಸಿದ್ದರಿಂದ ಪ್ರಯಾಣಿಕರು ನಿರಾಳರಾದರು. ಸರ್ಕಾರಿ ಬಸ್ ಒಂದೇ ಒಂದು ಕೂಡ ಡಿಪೋ ಬಿಟ್ಟು ಹೊರಗೆ ಬಾರದಿದ್ದರಿಂದ ಮಡಿಕೇರಿ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಹೊಡೆಯುತಿತ್ತು. ದೂರ ದೂರದ ಹೊರ ಜಿಲ್ಲೆಗಳಿಗೆ ಹೋಗಬೇಕಾಗಿದ್ದ ಕೆಲವರು ಬಸ್‍ಗಳ ವ್ಯವಸ್ಥೆ ಇಲ್ಲದೆ ಪರದಾಡಿದರು.
Advertisement
Advertisement
ಸಾರಿಗೆ ನೌಕರರು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಆಗಮಿಸಿದರು. ಈ ವೇಳೆ ಶಾಸಕ ಅಪ್ಪಚ್ಚು ರಂಜನ್ ಮುಷ್ಕರ ನಡೆಸುವ ಮೂಲಕ ನಿಮ್ಮ ಸಂಸ್ಥೆಗೆ ನೀವೇ ನಷ್ಟ ಮಾಡುತ್ತಿದ್ದೀರಿ. ಅನ್ನ ಕೊಡುವ ಸಂಸ್ಥೆಗೆ ಮಣ್ಣು ಹಾಕುತ್ತಿದ್ದೀರಿ ಎಂದು ಗರಂ ಆದರು. ಅಷ್ಟೇ ಅಲ್ಲ ನಿಮ್ಮ ಪ್ರತಿಭಟನೆಯನ್ನು ಕೈಬಿಡಿ, ನಾವು ಕೂಡ ಕಳೆದ ಒಂದು ವರ್ಷದಿಂದ ಅರ್ಧ ಸಂಬಳ ತೆಗೆದುಕೊಳ್ಳುತ್ತಿದ್ದೇವೆ. ಕೋವಿಡ್ ನಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಇದು ಸರಿಯಾದ ಬಳಿಕ ನಿಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದೆ ಎಂದರು. ಇದಕ್ಕೆ ನೌಕರರು ಕೂಡ ಸರ್ಕಾರ ಈಗ ಆರನೇ ವೇತನ ಜಾರಿಮಾಡಲಿ, ಆರ್ಥಿಕ ಸಂಕಷ್ಟದಿಂದ ಹೊರಬಂದ ಬಳಿಕವೇ ನಮಗೆ ಸಮಾನ ವೇತನ ನೀಡಲಿ ಎಂದು ಆಗ್ರಹಿಸಿ ಅಪ್ಪಚ್ಚು ರಂಜನ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Advertisement