ಬೆಂಗಳೂರು: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ್ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ಮಾಡಿದ್ದಾರೆ.
ಕೊರೊನಾ ಪಾಸಿಟಿವ್ ಬಂದು ಗುಣಮುಖರಾಗಿ ಕ್ವಾರಂಟೈನ್ ನಲ್ಲಿ ಇದ್ದ ಹಿನ್ನೆಲೆಯಲ್ಲಿ ಗಲಾಟೆ ನಡೆದ ಬಳಿಕ ಅಖಂಡರನ್ನು ಸಿದ್ದರಾಮಯ್ಯ ಭೇಟಿಯಾಗಿರಲಿಲ್ಲ. ಹೀಗಾಗಿ ಇಂದು ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮೈಸೂರಿನ ಸುತ್ತೂರು ಮಠದಲ್ಲಿ ಇಂದು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳವರ 105ನೇ ಜಯಂತಿ ಮಹೋತ್ಸವಕ್ಕೆ ಸಿದ್ದರಾಮಯ್ಯ ವೆಬಿನಾರ್ ಮೂಲಕ ತಮ್ಮ ಸರ್ಕಾರಿ ನಿವಾಸದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಲ್ಲದೆ ಶ್ರೀಗಳ ಕುರಿತಾದ ಕೃತಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಕ್ವಾರಂಟೈನ್ ಅವಧಿ ನಿನ್ನೆಗೆ ಮುಗಿದಿದೆ. ಹೀಗಾಗಿ ಇಂದು ಸುತ್ತೂರು ಮಠದ ಕಾರ್ಯಕ್ರಮಕ್ಕೆ ಅನ್ ಲೈನ್ ನಲ್ಲಿ ಭಾಗಿಯಾಗಿದ್ದೇನೆ. ಆಗಸ್ಟ್ 3ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದೆ, 26 ದಿನ ಆಗಿದೆ. ನಾನು ಕೊರೊನಾ ಸೋಂಕಿತನಾಗಿದ್ದೆ, ಈಗ ಗುಣಮುಖನಾಗಿದ್ದೇನೆ. ನನಗೆ ಶುಭ ಕೋರಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದು, ವೇಗವಾಗಿ ಹರಡುತ್ತದೆ. ಕೆಲವರಿಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ರೋಗದ ಲಕ್ಷಣಗಳೇ ಇರಲ್ಲ. ನನಗೆ ಆಗಸ್ಟ್ ಎರಡರಂದು ಜ್ವರ ಬಂದಿತ್ತು, ಆಗ ಟೆಸ್ಟ್ ಮಾಡಿಸಿದಾಗ ಕೊರೊನಾ ರೋಗ ದೃಢ ಆಗಿತ್ತು ಎಂದರು.