ಬೆಂಗಳೂರು: ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರಿಂದಲೇ ಸರ್ಕಾರಕ್ಕೆ ಮುಜುಗರ ಉಂಟಾದ ಘಟನೆ ಇಂದು ನಡೆದಿದೆ.
ವಿಧಾನಸಭಾ ಕಲಾಪದ ವೇಳೆ ಸಚಿವರು, ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಬಿಟ್ಟು ಬೇರೆ ಇಲಾಖೆಗೆ ನಾನು ಹೇಗೆ ಉತ್ತರಿಸಲಿ ಎಂದು ಹೇಳುವ ಮೂಲಕ ಸದನದಲ್ಲಿ ಅಸಹಾಯಕತೆ ಹೊರಹಾಕಿದರು.
ಮುಳವಾಡ ಮುಖ್ಯ ಕಾಲುವೆ ವಿಷಯದ ಬಗ್ಗೆ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಪ್ರಸ್ತಾಪ ಮಾಡಿದರು. ಅನಧಿಕೃತವಾಗಿ ಕಾಲುವೆ ಒಡೆದು ಬೇರೆಯವರಿಗೆ ನೀರು ಕೊಟ್ಟಿದ್ದಾರೆ. ಈ ಬಗ್ಗೆ ಫೋಟೋ ಸಮೇತ ನೀರಾವರಿ ಸಚಿವರಿಗೆ ಪತ್ರ ಬರೆದಿದ್ದೆ. ಆದರೆ ಏನೂ ಕ್ರಮ ಆಗಿಲ್ಲ ಎಂದು ಹೇಳಿ ಸರ್ಕಾರದ ಗಮನ ಸೆಳೆದರು.
ಇದಕ್ಕೆ ಉತ್ತರ ಕೊಡಲು ಹಿಂದೇಟು ಹಾಕಿದ ಮಾಧುಸ್ವಾಮಿ ಅಲ್ಲ, ಇದು ನನ್ನ ಇಲಾಖೆಗೆ ಬರಲ್ಲ, ಆದರೂ ನೀವೇ ಉತ್ತರ ಕೊಡಿ ಎಂದು ಅಧಿಕಾರಿಗಳು ನನಗೆ ನೋಟಿಸ್ ಕೊಡ್ತಾರೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಬಳಿಕ ಇದಕ್ಕೆ ನೀವೇ ಉತ್ತರ ಕೊಡಿ ಪರವಾಗಿಲ್ಲ ಎಂದು ಶಿವಾನಂದ ಪಾಟೀಲ್ ಹೇಳಿದರು. ಗಟ್ಟಿಯಾಗಿ ಉತ್ತರ ಕೊಟ್ಟಿದ್ದಕ್ಕೆ ನಾನು ಈಗ ಹಿಂದಕ್ಕೆ ಬಂದಿದ್ದೇನೆ ಎಂದು ಮಾರ್ಮಿಕವಾಗಿ ಮಾಧುಸ್ವಾಮಿ ಉತ್ತರಿಸಿದರು. ಈ ಮೂಲಕ ಖಾತೆ ಕಿತ್ತುಕೊಂಡಿದ್ದಕ್ಕೆ ಮಾಧುಸ್ವಾಮಿ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ.