ಚಾಮರಾಜನಗರ: ಶಾಲೆ ಆರಂಭ ಕುರಿತು ನಾಳೆ ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಈಗಾಗಲೇ 9-10 ಮೊದಲ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗಿವೆ. ಈಗ 6ನೇ ತರಗತಿಯಿಂದ ಶಾಲೆ ಆರಂಭಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಕೆಲವೆಡೆ 1ನೇ ತರಗತಿಯಿಂದಲೇ ಆರಂಭಿಸುವಂತೆ ಬೇಡಿಕೆ ಬರುತ್ತಿದೆ. ಈ ಬಗ್ಗೆ ನಾಳೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.
ಖಾಸಗಿ ಶಾಲೆಗಳ ಶುಲ್ಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ವಿಶೇಷ ಹಾಗೂ ವಿಚಿತ್ರ ವರ್ಷ. ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂಬುದು ನಮ್ಮ ನಿಲುವಾಗಿದೆ. ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ, ಆರೋಪ ಮಾಡುವುದರ ಬದಲು ಸಲಹೆ ನೀಡಲಿ ಎಂದು ತಿಳಿಸಿದರು.