ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಶಾಲಾ ವಿದ್ಯಾರ್ಥಿಗೆ ಚಾಕು ಇರಿದ ಪರಿಣಾಮ ಪಟ್ಟಣದ ಎರಡು ಸಮುದಾಯಗಳ ಜನರ ಮಧ್ಯೆ ಗಲಾಟೆ ನಡೆದಿದೆ.
ಕಲಘಟಗಿ ಪಟ್ಟಣದ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಮಂಜುನಾಥ ವೆಂಕಪ್ಪ ಲಮಾಣಿಗೆ ಕೆಲವರು ಚಾಕುವಿನಿಂದ ಬೆನ್ನು ಮತ್ತು ಹೊಟ್ಟೆಗೆ ಇರಿದಿದ್ದು, ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಶಾಲಾ ವಿದ್ಯಾರ್ಥಿಗೆ ಚಾಕು ಇರಿದ ವಿಷಯ ತಿಳಿಯುತ್ತಿದ್ದಂತೆ ಎರಡು ಗಲ್ಲಿಗಳ ಜನರು ಕಾದಾಟಕ್ಕೆ ಇಳಿದು ಗಲಾಟೆ ಮಾಡಿದ್ದಾರೆ. ಪರಿಣಾಮ ಪಟ್ಟಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪಟ್ಟಣದ ಹರಿಜನಕೇರಿ, ಲಂಬಾಣಿ ತಾಂಡಾ ಜನರ ಮಧ್ಯೆ ನಡೆದ ಗಲಾಟೆ ಹಿನ್ನೆಲೆಯಲ್ಲಿ ಪೊಲೀಸರು ಎರಡು ಸಮುದಾಯಗಳ ಜನರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆ ನೀಡಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.