ಮುಂಬೈ: ಮಾಲಿಯಾಳಂ ಸೂಪರ್ ಸ್ಟಾರ್ ಮೋಹನ್‍ಲಾಲ್ ಅವರು ಹೊಸ ಐಪಿಎಲ್ ತಂಡವನ್ನು ಖರೀದಿ ಮಾಡಲಿದ್ದಾರೆ ಎಂಬ ಹೊಸ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈಗಾಗಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್‍ಖಾನ್, ನಟಿಯರಾದ ಶಿಲ್ಪಾ ಶೆಟ್ಟಿ ಮತ್ತು ಪ್ರೀತಿ ಜಿಂಟಾ ಅವರು ಐಪಿಎಲ್‍ನಲ್ಲಿ ಫ್ರಾಂಚೈಸಿಗಳನ್ನು ಖರೀದಿ ಮಾಡಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ನಡುವೆ ಸೌತ್‍ಇಂಡಿಯನ್ ಸೂಪರ್ ಸ್ಟಾರ್ ಮೋಹನ್‍ಲಾಲ್ ಅವರು ಕೂಡ ಐಪಿಎಲ್ ತಂಡವೊಂದನ್ನು ಖರೀದಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಹೀಗೆ ಸುದ್ದಿಯೊಂದು ಓಡಾಡಲು ಕಾರಣವೂ ಇದೇ, ಕಳೆದ ಐಪಿಎಲ್-2020 ಫೈನಲ್ ನೋಡಲು ಮೋಹನ್‍ಲಾಲ್ ಅವರು ದುಬೈಗೆ ಹೋಗಿದ್ದರು. ಅವರು ಐಪಿಎಲ್ ವೀಕ್ಷಣೆ ಮಾಡುತ್ತೀರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ಈ ಸಮಯದಲ್ಲೇ ಬಿಸಿಸಿಐ ಹೊಸ ತಂಡಗಳನ್ನು ಐಪಿಎಲ್‍ಗೆ ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಕಾರಣದಿಂದ ಮೋಹನ್‍ಲಾಲ್ ಅವರು ಹೊಸ ತಂಡ ಖರೀದಿ ಮಾಡುತ್ತಾರೆ ಎಂದು ಹೇಳಲಾಗಿದೆ. ಆದರೆ ನಟನ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಮೋಹನ್‍ಲಾಲ್‍ಗೂ ಮುನ್ನವೇ ಸಲ್ಮಾನ್ ಖಾನ್ ಅವರು ಸಹೋದರು ಐಪಿಎಲ್ ತಂಡವನ್ನು ಖರೀದಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈಗ ಬಿಸಿಸಿಐ ಮತ್ತೆ ಹೊಸ ತಂಡಗಳ ಸೇರ್ಪಡೆಯ ಮಾತುಗಳನ್ನು ಆಡಿರುವುದರಿಂದ ಯಾವ ನಟ ಮೊದಲಿಗೆ ತಂಡ ಖರೀದಿ ಮಾಡಲಿದ್ದಾರೆ ಕಾದು ನೋಡಬೇಕಿದೆ. ಸದ್ಯ ಶಾರುಖ್‍ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್, ಪ್ರೀತಿ ಜಿಂಟಾ ಅವರ ಕಿಂಗ್ಸ್ ಇಲೆವೆನ್ ಪಂಜಾಬ್, ಶಿಲ್ಪಾ ಶೆಟ್ಟಿ ಒಡೆತನದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್‍ನಲ್ಲಿ ಸಕ್ರಿಯವಾಗಿವೆ.