-ನನಸಾಗುತ್ತಿದೆ ದ್ವೀಪದ ಜನರ ದಶಕಗಳ ಕನಸು
ಶಿವಮೊಗ್ಗ: ಇದು ಸರಿಸುಮಾರು ದಶಕಗಳ ಕನಸು. ಈ ಊರಿನ ಜನರಿಗೆ ಇಲ್ಲೊಂದು ಸೇತುವೆ ಬೇಕಾಗಿತ್ತು. ಪಕ್ಕದ ತಾಲೂಕು ಕೇಂದ್ರಕ್ಕೆ 40 ಕಿ.ಮೀ. ಕ್ರಮಿಸುವ ಬದಲು ಬರೋಬ್ಬರಿ 150 ಕಿ.ಮೀ. ಕ್ರಮಿಸಬೇಕಿತ್ತು. ಹೀಗಾಗಿ ಸೇತುವೆ ನಿರ್ಮಾಣ ಮಾಡಿ ಅಂತಾ ಈ ಊರಿನ ಜನರು ಸಾಕಷ್ಟು ಬಾರಿ ಹೋರಾಟ ಮಾಡಿ, ಮಾಡಿ ಸುಸ್ತಾಗಿದ್ರು. ಆದ್ರೆ ಕೊನೆಗೂ ಈ ಗ್ರಾಮದ ಜನರಿಗೆ ಸೇತುವೆ ಭಾಗ್ಯ ಒದಗಿ ಬಂದಿದೆ. ರಾಜ್ಯದಲ್ಲಿಯೇ 2ನೇ ಅತಿ ದೊಡ್ಡ ಸೇತುವೆ ಇಲ್ಲಿ ನಿರ್ಮಾಣಗೊಳ್ಳುತ್ತಿದೆ. ನೀರಿನಾಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಇದು ರಾಜ್ಯಕ್ಕೆ ಬೆಳಕು ನೀಡಿ, ತಾವು ಕತ್ತಲಲ್ಲಿ ಇರುವ ಜನರಿಗೆ ಖುಷಿ ನೀಡುವ ಕಥೆ. ಶರಾವತಿ ಹಿನ್ನೀರಿನ ಜನರು ರಾಜ್ಯಕ್ಕೆ ಬೆಳಕು ನೀಡಲು ಹೋಗಿ ತಮ್ಮ ಸರ್ವಸ್ವವನ್ನೇ ಕಳೆದುಕೊಂಡಿದ್ದರು. ಈ ಊರಿನ ಜನರಿಗೆ ತಾಲೂಕು ಕೇಂದ್ರ ಹತ್ತಿರವಿದ್ದರೂ, ಸಂಪರ್ಕ ಕೊಂಡಿಯೇ ಇರಲಿಲ್ಲ. ಮುಳುಗಡೆ ಪ್ರದೇಶದಲ್ಲಿರುವ ಅಂಬಾರಗೊಡ್ಲು, ಕಳಸವಳ್ಳಿ, ತುಮರಿ, ಬ್ಯಾಕೋಡು ಮತ್ತಿತರ ಗ್ರಾಮದ ಜನರಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕೇಂದ್ರಕ್ಕೆ ತೆರಳಬೇಕಂದ್ರೆ ಕೇವಲ 40 ಕಿ.ಮೀ. ದೂರವಿದ್ದರೂ ಸುಮಾರು 150 ಕೀ.ಮೀ. ದೂರ ಕ್ರಮಿಸುವ ಅನಿವಾರ್ಯವಿದೆ. ಹೀಗಾಗಿ ಕಳೆದ 1963 ರಿಂದಲೂ ಈ ಒಂದು ಸೇತುವೆಗಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿತ್ತು. ಇದೀಗ ಸೇತುವೆ ಕಾಮಗಾರಿ ಆರಂಭಗೊಂಡಿದ್ದು ಇಲ್ಲಿನ ಜನರು ನಿಟ್ಟುಸಿರು ಬಿಡುವಂತಾಗಿದೆ.
ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆಯಡಿ ಸುಮಾರು 423 ಕೋಟಿ ರೂ. ವೆಚ್ಚದಲ್ಲಿ ತುಮರಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಸಿಗಂಧೂರು ಶ್ರೀ ಕ್ಷೇತ್ರಕ್ಕೆ ತೆರಳುವ ಮಾರ್ಗದ ಹಿನ್ನೀರಿನಲ್ಲಿ 18 ಗೋಪುರಗಳನ್ನು ಒಳಗೊಂಡ 2.1 ಕಿ.ಮೀ. ಉದ್ದ, 16 ಮೀ. ಅಗಲದ ಕೇಬಲ್ ಮಾದರಿಯ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ತ್ಯಾಗ ಮಾಡಿದ ಶರಾವತಿ ಹಿನ್ನೀರು ಪ್ರದೇಶದ ಜನರು ದಶಕಗಳಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರು. ದ್ವೀಪ ಪ್ರದೇಶದ ಜನರು ಸಂಚಾರಕ್ಕೆ ಇಂದಿಗೂ ಲಾಂಚ್ ನ್ನೇ ಅವಲಂಬಿಸಿದ್ದಾರೆ. ತಾಲೂಕು ಕೇಂದ್ರ ಸಾಗರಕ್ಕೆ ಬರಲು ಹರಸಾಹಸಪಡುವ ಇಲ್ಲಿನ ಜನರು ಸೇತುವೆ ಬೇಕು ಎಂದು ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಿದ್ದರು. ಇದೆಲ್ಲದರ ಪರಿಣಾಮ ಇದೀಗ ಈ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಟೆಂಡರ್ ನಿಯಮಾವಳಿ ಪ್ರಕಾರ 2023 ನೇ ಜೂನ್ ಒಳಗೆ ಈ ಕಾಮಗಾರಿ ಮುಕ್ತಾಯಗೊಳ್ಳಬೇಕಿದೆ.
ಅಷ್ಟಕ್ಕೂ ಈ ತುಮರಿ ಸೇತುವೆ ರಾಜ್ಯದಲ್ಲಿಯೇ 2 ನೇ ಅತಿ ದೊಡ್ಡ ಸೇತುವೆಯಾಗಿ ನಿರ್ಮಾಣಗೊಳ್ಳಲಿದೆ. ಸೇತುವೆಯು 2.125 ಮೀಟರ್ ಉದ್ದ, 16 ಮೀ. ಅಗಲವಾಗಿ ನಿರ್ಮಾಣಗೊಳ್ಳುತ್ತಿದೆ. 177 ಮೀ. ಗೆ ಒಂದರಂತೆ ಪಿಲ್ಲರ್ ಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಅಂಬಾರಗೊಡ್ಲುವಿನಿಂದ 1 ಕಿ.ಮೀ., ಕಳಸವಳ್ಳಿಯಿಂದ 3 ಕಿ.ಮೀ. ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ಇಕ್ಕೇರಿಯಿಂದ ಮರಕುಟಕ ಗ್ರಾಮದವರೆಗಿನ ರಸ್ತೆಯನ್ನು ಹೆದ್ದಾರಿಯನ್ನಾಗಿ ಪರಿವರ್ತಿಸಲಾಗಿದೆ.
2008ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಈ ಸೇತುವೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದರು. ನಂತರ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಪ್ರತಿ ಬಾರಿ ಲೋಕಸಭೆ, ವಿಧಾನಸಭೆ ಚುನಾವಣೆ ಬಂದಾಗಲೆಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಸೇತುವೆ ಬಗ್ಗೆ ಆಶ್ವಾಸನೆ ನೀಡುವುದು, ಅದು ಜಾರಿಗೆ ಬಾರದೇ ಇರುವುದು ನಡೆಯುತ್ತಿತ್ತು. ಹೀಗಾಗಿ ಸೇತುವೆ ಆಗುತ್ತದೆ ಎಂಬ ವಿಶ್ವಾಸವನ್ನೇ ಈ ಭಾಗದ ಜನರು ಕಳೆದುಕೊಂಡಿದ್ದರು.
ನಂತರ ಹೋರಾಟ, ಪಾದಯಾತ್ರೆ, ಮೂಲಕ ಸರ್ಕಾರವನ್ನು ಎಚ್ಚರಿಸುವಂತಹ ಕೆಲಸವನ್ನು ಈ ಭಾಗದ ಜನರು ಮಾಡಿದ ಪ್ರತಿಫಲವಾಗಿ 2018ರಲ್ಲಿ ಆಗಿನ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದ ನಿತಿನ್ ಗಡ್ಕರಿ ಈ ಸೇತುವೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಮಧ್ಯ ಪ್ರದೇಶದ ಬಿಲ್ಡ್ ಕಾನ್ ಸಂಸ್ಥೆಯು ಈ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿದ್ದು, ಹೊರ ರಾಜ್ಯಗಳಿಂದ ಸುಮಾರು 300 ರಿಂದ 400 ಕ್ಕೂ ಹೆಚ್ಚು ಕಾರ್ಮಿಕರು, ಈ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಲಾಕ್‍ಡೌನ್ ಘೋಷಣೆಯಾದಾಗ ಈ ಕಾಮಗಾರಿಗೆ ಹಿನ್ನೆಡೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈ ಕಾಮಗಾರಿ ನಿಲ್ಲದೇ ಇನ್ನು ಮುಂದುವರೆದಿದೆ. ಇದರಿಂದಾಗಿ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದ್ದು ತಮಗೆ ಓಡಾಡಲು ಅನುಕೂಲವಾಗಲಿದೆ ಎಂಬ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ನಿರ್ಮಾಣವಾಗುವ ವಿಶ್ವಾಸವನ್ನೇ ಕಳೆದುಕೊಂಡಿದ್ದ ಸೇತುವೆಯೊಂದು ಇದೀಗ ರಾಜ್ಯದ 2 ನೇ ಅತಿ ದೊಡ್ಡ ಸೇತುವೆಯಾಗಿ ಇಲ್ಲಿ ನಿರ್ಮಾಣಗೊಳ್ಳುತ್ತಿರುವುದಂತೂ ಸತ್ಯ. ಇದೀಗ ಇಲ್ಲಿನ ದ್ವೀಪ ಪ್ರದೇಶದ ಜನರ ಸಂಚಾರಕ್ಕೆ ಹಿಡಿದಿದ್ದ ಗ್ರಹಣ ಸಮಸ್ಯೆಗೆ ಮುಕ್ತಿ ಸಿಗುವಂತಾಗಿದೆ.