– ಪರಿಷತ್ ಗಲಾಟೆಗೆ ಕಾಂಗ್ರೆಸ್ ಕಾರಣ
ಮಡಿಕೇರಿ: ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ, ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಮುಳುಗುತ್ತಿರುವ ಹಡಗನ್ನ ಏರುತ್ತೇನೆ ಎಂದು ಏನು ಮಾಡಲು ಸಾಧ್ಯ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ನಡೆದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿದ್ದ ಸಂದರ್ಭ ಮಾತನಾಡಿದರು.
Advertisement
ಕಾಂಗ್ರೆಸ್ ಸೇರುತ್ತಿರೋದು ಶರತ್ ಅವರ ವೈಯಕ್ತಿಕ ವಿಚಾರ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದ್ದರೆ ಅವರಿಗೆ ಒಳ್ಳೆಯದಾಗಲಿ. ಆದರೆ ಮುಳುಗುತ್ತಿರುವ ಹಡಗನ್ನು ಏರುತ್ತೇನೆ ಎಂದರೆ ಏನು ಮಾಡೋದಕ್ಕೆ ಆಗುತ್ತದೆ. ಅವರ ತಂದೆ ನಮ್ಮ ಪಕ್ಷದಿಂದ ಸಂಸದರಾಗಿದ್ದವರು. ಮಗ ಕಾಂಗ್ರೆಸ್ ಗೆ ಹೋಗುತ್ತೇನೆ ಅಂದರೆ ಏನು ಮಾಡೋದಕ್ಕೆ ಆಗುತ್ತದೆ ಅವರೇ ಈ ಬಗ್ಗೆ ಯೋಚಿಸಲಿ ಎಂದರು.
Advertisement
Advertisement
ಕಾಂಗ್ರೆಸ್ ನೇರ ಕಾರಣ: ವಿಧಾನ ಪರಿಷತ್ ಸಭಾಧ್ಯಕ್ಷರ ರಾಜೀನಾಮೇಗೆ ಸಂಬಂಧಿಸಿದಂತೆ ನಡೆದ ಗಲಾಟೆಗೆ ಕಾಂಗ್ರೆಸ್ ನೇರ ಕಾರಣ. ನಾನು ಸಹ ಎರಡು ಬಾರಿ ಪರಿಷತ್ ಸದಸ್ಯನಾಗಿದ್ದೆ. ಆ ಪರಿಷತ್ತಿನ ಸದಸ್ಯರು ಒಂದು ಘನತೆಯಿಂದ ನಡೆದುಕೊಳ್ಳುತ್ತಿದ್ದರು. ಸ್ಪೀಕರ್ ಅವರೇ ರಾಜೀನಾಮೆ ಕೊಡಗು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್ ನವರು ಹತಾಶರಾಗಿ ಅದನ್ನು ತಡೆದರು. ಇದರ ಪರಿಣಾಮವಾಗಿ ಗಲಾಟೆಯಾಗಿದೆ. ಹೀಗಾಗಿ ಆ ಗಲಾಟೆಗೆ ಕಾಂಗ್ರೆಸ್ ನೇರ ಕಾರಣ ಎಂದು ಟೀಕಿಸಿದರು. ಪರಿಷತ್ ಅನ್ನೋದು ಚಿಂತಕರ ಛಾವಡಿ. ಆದರೆ ಅದರ ಮೇಲೆ ಗದಾಪ್ರಹಾರ ಮಾಡಿದ್ದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.
Advertisement
ವಿಧಾನ ಪರಿಷತ್ ಗಲಾಟೆಗೆ ಸಂಬಂಧಿಸಿ ಮಾತನಾಡಿದ ಕೊಡಗು ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಘನ ಉದ್ದೇಶಗಳಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಗಳು ರಚನೆಯಾಗಿವೆ. ಅವುಗಳಿಗೆ ಬರುವವರ ಜ್ಞಾನ ದೇಶಕ್ಕೆ ಉಪಯೋಗವಾಗಬೇಕು ಎನ್ನೋ ಉದ್ದೇಶವಿದೆ. ಪರಿಷತ್ ಸದಸ್ಯರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.