ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷ ಸೇರುವುದು ಆತನ ಇಷ್ಟ. ಅದು ನನಗೆ ಸಂಬಂಧವಿಲ್ಲ ಎಂದು ಶರತ್ ತಂದೆ ಹಾಗೂ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗ ಶರತ್ ಕಾಂಗ್ರೆಸ್ ಪಕ್ಷ ಸೇರುವುದು ಆತನಿಗೆ ಬಿಟ್ಟ ವಿಚಾರ. ಬಿಜೆಪಿ ಪಕ್ಷದಿಂದ ಸಂಸದನಾಗಿ ಆಯ್ಕೆಯಾಗಿದ್ದೇನೆ. ಬಿಜೆಪಿ ಪಕ್ಷದಡಿಯಲ್ಲಿ ಕೆಲಸ, ಕಾರ್ಯ ಮಾಡುತ್ತಿದ್ದೇನೆ. ಸದ್ಯಕ್ಕೆ ಇಬ್ಬರೂ ಒಂದೇ ಮನೆಯಲ್ಲಿದ್ದು, ಒಂದೇ ಮನೆಯಲ್ಲಿ ಇರೋದು ಬೇಡವೇ ಎಂದು ಮರುಪ್ರಶ್ನೆ ಹಾಕಿ ನಸುನಕ್ಕರು.
ಕೊರೊನಾ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ಕಾರ್ಯ ಮಾಡಿದ್ದು, ವಿಶ್ವದಲ್ಲೇ ನಂಬರ್ ಒನ್ ನಾಯಕ ಎನಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು. ಇದೇ ವೇಳೆ ತಮ್ಮ ಮಗ ಕಾಂಗ್ರೆಸ್ ಸೇರುವ ಕುರಿತು ನಾಜೂಕಾಗೇ ಮಾತನಾಡಿ ಜಾರಿಕೊಂಡರು.