– ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಮಾಸ್ಟರ್ ಪ್ಲಾನ್
ಚಾಮರಾಜನಗರ: ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳ ಬೆನ್ನಲ್ಲೇ ಶತಮಾನ ಪೂರೈಸಿರುವ ಶಾಲೆಗಳಿಗೆ ಆಧುನಿಕ ಟಚ್ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಶತಮಾನೋತ್ಸವ ಪೂರೈಸಿರುವ ಶಾಲೆಗಳಲ್ಲಿ ಗತ ವೈಭವ ಮರುಕಳಿಸಲಿದ್ದು, ಈ ಶಾಲೆಗಳ ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದಂತೆ ನವೀಕರಿಸಿ ಮೂಲ ಸೌಕರ್ಯ ಕಲ್ಪಿಸಿ ಐತಿಹಾಸಿಕ ಸ್ಥಳಗಳನ್ನಾಗಿ ಸಂರಕ್ಷಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈಗಾಗಲೇ ಮೂರು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ತಲಾ 5 ಲಕ್ಷ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಶಿಕ್ಷಣ ಸಚಿವರೇ ಉಸ್ತುವಾರಿ ವಹಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ 100 ವರ್ಷ ಪೂರೈಸಿರುವ 36 ಸರ್ಕಾರಿ ಶಾಲೆಗಳಿವೆ. ಅವುಗಳ ಇತಿಹಾಸಕ್ಕೆ ಧಕ್ಕೆಯಾಗದಂತೆ ಹೊಸ ಮೆರಗು ನೀಡಲು ಜಿಲ್ಲಾಡಳಿತ ಮುಂದಾಗಿದೆ. ಈ ಶಾಲೆಗಳ ಇತಿಹಾಸ, ಆರಂಭ, ನಡೆದು ಬಂದ ಹಾದಿಯ ದಾಖಲೀಕರಣ ಮಾಡಿ, ಇಂದಿನ ಪೀಳಿಗೆಗೆ ಪರಿಚಯಿಸಲು ಪ್ರತಿ ಶಾಲೆಯ ಆವರಣದಲ್ಲಿ ಶಾಲಾ ಇತಿಹಾಸ, ಮಹತ್ವ, ವೈಶಿಷ್ಟ್ಯಗಳ ಬಗ್ಗೆ ಪ್ರಚುರ ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಐತಿಹಾಸಿಕ ಶಾಲೆಗಳನ್ನು ಸಂರಕ್ಷಿಸಲು ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಶಾಲೆಗಳ ಅಭಿವೃದ್ಧಿಗಾಗಿ ಜಿಲ್ಲಾ ಮಟ್ಟದ ಸಮಿತಿಯನ್ನೂ ಸಹ ರಚಿಸಿದೆ.
1916ರಲ್ಲಿ ನಿರ್ಮಾಣವಾಗಿರುವ ಗುಂಡ್ಲುಪೇಟೆ ತಾಲೂಕು ಹಂಗಳ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, 1900 ರಲ್ಲಿ ಆರಂಭವಾದ ಹನೂರು ತಾಲೂಕು ರಾಮಾಪುರ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಹಾಗೂ 1909 ರಲ್ಲಿ ನಿರ್ಮಿಸಿರುವ ಕೊಳ್ಳೇಗಾಲ ತಾಲೂಕು ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ರಾಜ್ಯ ವಲಯ ಯೋಜನೆಯಡಿ ತಲಾ 5 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿಯನ್ನು ಈಗಾಗಲೇ ರಚನೆ ಮಾಡಿದ್ದು, ಹಂತ ಹಂತವಾಗಿ ಶಾಲೆ ಅಭಿವೃದ್ಧಿ ಮಾಡಲೂ ಪ್ಲಾನ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಶತಮಾನಗಳ ಇತಿಹಾಸ ಸಾರುತ್ತಿರುವ ಈ ಶಾಲೆಗಳ ವೈಭವವನ್ನು ಮರಕಳಿಸುವಂತೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಳೆ ವಿದ್ಯಾರ್ಥಿಗಳ ಸಂಘ ರಚಿಸಲು ಸಹ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳ ಬಗ್ಗೆ ವಿಶೇಷ ಪ್ರೀತಿ ಅಭಿಮಾನದಿಂದ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಮುಂದೆ ಬರಬಹುದು ಎಂಬ ನಿರೀಕ್ಷೆ ಜಿಲ್ಲಾಡಳಿತದ್ದಾಗಿದೆ.