ಕೋಲಾರ: ಮಾಜಿ ಸಚಿವ ಎಂ.ಟಿ.ಬಿ ನಾಗರಾಜ್ ಸೇರಿದಂತೆ ವಿಶ್ವನಾಥ್ ಹಾಗೂ ಶಂಕರ್ ಅವರಿಗೆ ನ್ಯಾಯಬದ್ಧವಾಗಿ ಎಂ.ಎಲ್.ಸಿ ಸ್ಥಾನ ನೀಡಬೇಕೆಂದು ಅಬಕಾರಿ ಸಚಿವ ಎಚ್.ನಾಗೇಶ್ ತಮ್ಮ ಆಪ್ತರ ಪರವಾಗಿ ಬ್ಯಾಟ್ ಬೀಸಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಮನ್ವಂತರ ಪ್ರಕಾಶನ ಹಾಗೂ ಜನಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯಾಗಲು ಈ ಮೂವರು ಕಾರಣರಾಗಿದ್ದಾರೆ ಎಂದರು.
ಎಂಟಿಬಿ ನಾಗರಾಜ್ ಸೇರಿದಂತೆ ಈ ಮೂವರು ತ್ಯಾಗ ಮಾಡಿದ್ದಾರೆ. ಹೀಗಾಗಿ ಅವರಿಗೆ ಎಂ.ಎಲ್.ಸಿ ಸ್ಥಾನ ನೀಡುವುದರಲ್ಲಿ ತಪ್ಪಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಅಲ್ಲದೆ ನಾನು ಸೇರಿದಂತೆ 18 ಜನರು ಕಷ್ಟಕಾಲದಲ್ಲಿದ್ದಾಗ ಕೈ ಹಿಡಿದಿದ್ದೇವೆ. ಹೀಗಾಗಿ ನಾನು ಸಹ ಅವರ ಪರವಾಗಿ ಎಂ.ಎಲ್.ಸಿ ಸ್ಥಾನ ನೀಡಬೇಕೆಂದು ಒತ್ತಾಯ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೆ ಹಾಗೂ ಆಡಳಿತದಲ್ಲಿರುವುದಕ್ಕೆ ಕಾರಣ ಇವರು. ಇಲ್ಲವಾದಲ್ಲಿ ವಿರೋಧ ಪಕ್ಷದಲ್ಲಿರಬೇಕಿತ್ತು. ಯಡಿಯೂರಪ್ಪ ಅವರು ಮಾತು ಕೊಟ್ಟರೆ ಯಾವತ್ತೂ ತಪ್ಪುವುದಿಲ್ಲ, ಅವರದ್ದು ಮಾತು ಕೊಟ್ಟರೆ ನಡೆದುಕೊಳ್ಳುವಂತಹ ಗುಣ. ನನ್ನ ಎರಡು ವರ್ಷದ ಅನುಭವದಲ್ಲಿ ನುಡಿದಂತೆ ನಡೆದ ಧೀಮಂತ ನಾಯಕ ಅವರು ಎಂದರು.
ಈಗಾಗಲೇ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಅವಕಾಶ ನೀಡಲಾಗಿದೆ. ಉಳಿದಂತೆ ಪಬ್‍ಗಳು ಓಪನ್ ಮಾಡಲು ಇದೆ 8 ರಂದು ತೀರ್ಮಾನ ಮಾಡಲಾಗುವುದು.