ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತುಂತುರು ಮಳೆಯಿಂದ ರಕ್ಷಣೆ ಪಡೆಯಲು ಹಿಡಿದಿದ್ದ ಆರ್‌ಸಿಬಿ ಛತ್ರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಶಿರಾ ಉಪ ಚುನಾವಣೆಯ ಪ್ರಚಾರದಲ್ಲಿ ಡಿಕೆ ಶಿವಕುಮಾರ್ ಅವರು ಬ್ಯುಸಿಯಾಗಿದ್ದು, ಈ ವೇಳೆ ಶಿರಾದ ದೊಡ್ಡ ಆಲದ ಮರ ಬಳಿ ಪ್ರಚಾರ ಕಾರ್ಯದಲ್ಲಿದ್ದ ಸಂದರ್ಭದಲ್ಲಿ ದಿಢೀರ್ ಎಂದು ತುಂತುರು ಮಳೆ ಆರಂಭವಾಗಿತ್ತು. ಮಳೆ ಆರಂಭವಾಗುತ್ತಿದಂತೆ ಪ್ರಚಾರ ವಾಹನದಲ್ಲಿದ್ದ ಕಾರ್ಯಕರ್ತರು ಸಮೀಪದಲ್ಲೇ ಇದ್ದ ಅಂಗಡಿಯಿಂದ ಛತ್ರಿಯನ್ನು ತಂದಿದ್ದರು. ತುಂತುರು ಮಳೆಯ ನಡುವೆಯೂ ಕಾಂಗ್ರೆಸ್ ಪಕ್ಷದ ನಾಯಕರು ಪ್ರಚಾರವನ್ನು ಮುಂದುವರಿಸಿದ್ದರು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಛತ್ರಿ ಹಿಡಿದಿರುವ ಡಿಕೆ ಶಿವಕುಮಾರ್ ಅವರ ಫೋಟೋಗಳನ್ನು ಆರ್‌ಸಿಬಿ ಅಭಿಮಾಣಿಗಳು ವೈರಲ್ ಮಾಡಿದ್ದಾರೆ. ಈ ಫೋಟೋಗಳಿಗೆ ಕಾಮೆಂಟ್ ಮಾಡಿರುವ ಕೆಲವರು, ಡಿಕೆ ಶಿವಕುಮಾರ್ ಆರ್‍ಸಿಬಿ ಛತ್ರಿ ಹಿಡಿದ ಮೇಲೆ ಗೆಲುವಿನ ಲಕ್ಷ್ಮೀ ಆರ್‌ಸಿಬಿಗೆ ಒಲಿಯಿತು ಎಂದು ಬರೆದುಕೊಂಡಿದ್ದಾರೆ. ಮತ್ತೆ ಕೆಲವರು ಡಿಕೆ ಶಿವಕುಮಾರ್ ಅವರಿಗೂ ಗೊತ್ತಾಗಿದೆ ಈ ಸಲ ಕಪ್ ನಮ್ದೆ ಅಂತಾ ಎಂದು ಹೇಳಿದ್ದಾರೆ. ಇದನ್ನೂ ಓದಿ: 40 ವರ್ಷಗಳ ನಂತ್ರ ಕಾವೇರಿಯಲ್ಲಿ ಈಜಾಡಿದ ಡಿಕೆಶಿ
ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ತಮ್ಮ ಮಗಳು ಹಾಗೂ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯ ಕಾರ್ಯಕ್ರಮವನ್ನು ಸರಳವಾಗಿ ಮನೆಯಲ್ಲಿಯೇ ಮಾಡಿದ್ದರು. ಆ ಬಳಿಕ ಜೂನ್ 22 ರಂದು ಕಾವೇರಿ ನದಿ ಬಳಿ ತೆರಳಿದ್ದರು. ಬರೋಬ್ಬರಿ 40 ವರ್ಷಗಳ ಬಳಿಕ ಕಾವೇರಿ ನದಿಯಲ್ಲಿ ಈಜಾಡಿ ಸಮಯ ಕಳೆದ್ದರು. ಆ ವೇಳೆಯೂ ಆರ್‌ಸಿಬಿ ಛತ್ರಿಯನ್ನು ಹಿಡಿದು ನದಿ ದಡದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಫೋಟೋವನ್ನು ಹಂಚಿಕೊಂಡಿದ್ದರು.
ಉಳಿದಂತೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 6.3 ಓವರ್ ಬಾಕಿ ಇರುವಂತೆ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ. 10 ಪಂದ್ಯವಾಡಿ 14 ಅಂಕಗಳೊಂದಿಗೆ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ರನ್ ರೇಟಿನಲ್ಲಿ ಆರ್‌ಸಿಬಿ ಸೂಪರ್ ಜಂಪ್