ಹಾಸನ: ಚೆನ್ನಾಗಿದ್ದ ರೋಗಿಗೆ ಕೊರೊನಾ ಎಂದು ಹೇಳಿ ವೈದ್ಯರು ತುರ್ತು ಘಟಕದಲ್ಲಿಟ್ಟು ಒಂದು ಜೀವ ಬಲಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಎ. ಚೋಳನಹಳ್ಳಿಯಲ್ಲಿ ನಿವಾಸಿಯಾಗಿರುವ ಮಹೇಶ್ (50) ಕಳೆದ 8 ದಿನಗಳ ಹಿಂದೆ, ಹಾಸನ ಜಿಲ್ಲಾಸ್ಪತ್ರೆಗೆ ಕೊರೊನಾ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹೇಶ್ ಮೃತಪಟ್ಟಿದ್ದಾರೆ. ಮಹೇಶ್ ಚೆನ್ನಾಗಿಯೇ ಇದ್ದರು. ಕೊನೆಯಲ್ಲಿ ಕೊರೊನಾ ಇದೆ ಎಂದು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅವರ ಜೊತೆ ನಾವುಗಳು ಆರು ಜನರು ಸಂಪರ್ಕದಲ್ಲಿದ್ದೇವೆ. ನಮಗೆ ಯಾವ ಪಾಸಿಟಿವ್ ಇಲ್ಲದಿದ್ದರೂ ಅವರಿಗೊಬ್ಬರಿಗೆ ಮಾತ್ರ ಪಾಸಿಟಿವ್ ಬಂದಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇಲ್ಲಿ ಆಗದಿದ್ದರೇ ವಾಪಸ್ ಕಳುಹಿಸಿ ನಾವು ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿರುವುದಾಗಿ ಮನವಿ ಮಾಡಲಾಯಿತು. ಆದರೂ ಬಲವಂತವಾಗಿ ಐಸಿಯುಗೆ ಹಾಕಿ ಈಗ ಒಂದು ಪ್ರಾಣದ ಜೊತೆ ಆಟವಾಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಕೃಷ್ಣಮೂರ್ತಿ ಸೂಕ್ತ ತನಿಖೆ ಮಾಡಿಸಿ ನ್ಯಾಯಕೊಡಿಸುವುದಾಗಿ ಭರವಸೆ ನೀಡಿದ ನಂತರ ಕುಟುಂಬಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.