-ಡಿಜೆ ಹಳ್ಳಿ ಪೊಲೀಸರಿಂದ ಆರೋಪಿಯ ಬಂಧನ
ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಭದ್ರತಾ ಸಿಬ್ಬಂದಿ ಮುಖಕ್ಕೆ ಉಗಿದು ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಆರ್.ಟಿ.ನಗರದ ಚಿತ್ರಮಂದಿರದ ಬಳಿ ಆರೋಪಿ ಸುತ್ತಾಡುತ್ತಿದ್ದ ಸಂದರ್ಭದಲ್ಲಿ ಆರೋಪಿಯ ಬಂಧನ ಮಾಡಲಾಗಿದೆ.
Advertisement
ಕಾವಲ್ ಭೈರಸಂದ್ರದ ನಿವಾಸಿಯಾಗಿದ್ದ ಆರೋಪಿಗೆ ಕೋವಿಡ್-19 ಪಾಸಿಟಿವ್ ದೃಢವಾದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ 3ನೇ ಮಹಡಿಯ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಇಂದು ಬೆಳಗ್ಗೆ 10:30ಕ್ಕೆ ವೈದ್ಯರಿಗೆ, ಭದ್ರತಾ ಸಿಬ್ಬಂದಿಯ ಮುಖಕ್ಕೆ ಉಗಿದು ಪರಾರಿಯಾಗಿದ್ದ.
Advertisement
ವಿಕ್ಟೋರಿಯಾ ಆಸ್ಪತ್ರೆಯಿಂದ ಬಂದ ಆರೋಪಿ ವಾಣಿ ವಿಲಾಸ ಆಸ್ಪತ್ರೆಯ ಕಾಂಪೌಂಡ್ ಹಾರಿ ಪರಾರಿಯಾಗಿದ್ದ. ಕೂಡಲೇ ಪೊಲೀಸರು ಆರೋಪಿಯ ಹುಡುಕಾಟ ಆರಂಭಿಸಿದ್ದರು. ಸಂಜೆ 6 ವೇಳೆ ಆರ್.ಟಿ.ನಗರದ ಚಿತ್ರಮಂದಿರದ ಬಳಿ ಆರೋಪಿ ಸುತ್ತಾಟ ನಡೆಸಿದ್ದ ಮಾಹಿತಿಯನ್ನು ಸ್ಥಳೀಯರು ನೀಡಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಕೊರೊನಾ ಚಿಕಿತ್ಸಾ ವಿಧಾನಕ್ಕೆ ಹೆದರಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.