– ಲಸಿಕೆಯಿಂದ ಅಡ್ಡ ಪರಿಣಾಮವಿಲ್ಲ
ಬೆಂಗಳೂರು: ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದು ಸಾಮಾನ್ಯ ಜನರಿಗೆ ಸ್ಫೂರ್ತಿ ಶಕ್ತಿಯಾಗಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರಸೂತಿ ಟ್ರೈಯಾಜ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಐಸಿಯು ಉದ್ಘಾಟನೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ಆರಂಭವಾದ ಹತ್ತೇ ತಿಂಗಳಲ್ಲಿ ರಾಜ್ಯಕ್ಕೆ ಲಸಿಕೆ ಬಂದಿದೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಲಸಿಕೆಯ ರಾಯಭಾರಿಗಳಾಗಬೇಕು. ವಿದ್ಯಾರ್ಥಿಗಳು ಆದ್ಯತೆಯಲ್ಲಿ ಬಂದು ಲಸಿಕೆ ಪಡೆದಾಗ ಬೇರೆ ಇಲಾಖೆಗಳ ಸಿಬ್ಬಂದಿಗೆ ಧೈರ್ಯ ಬರುತ್ತದೆ. ಲಸಿಕೆ ಪಡೆಯಲು ಕೆಲವರು ಪರೀಕ್ಷೆಯ ನೆಪ ಒಡ್ಡುತ್ತಿದ್ದಾರೆ. ಆದರೆ ಪರೀಕ್ಷೆಗೂ ಲಸಿಕೆಗೂ ಸಂಬಂಧವಿಲ್ಲ. ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಅನೇಕ ಅಧಿಕಾರಿಗಳು ಮುಂದೆ ಬಂದು ಲಸಿಕೆ ಪಡೆದು ಮಾದರಿಯಾಗಿದ್ದಾರೆ. ಈ ನೈತಿಕ ಸ್ಫೂರ್ತಿಯನ್ನು ಜನರಿಗೆ ನೀಡುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಳ್ಳಬೇಕು ಎಂದು ಕೋರಿದರು.
Advertisement
ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಪ್ರಸೂತಿ ಟ್ರಯಾಜ್ ವಲಯ ಹಾಗೂ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮೇಲ್ದರ್ಜೆಗೇರಿಸಿರುವ ರೇಸ್ಪಿರೇಟರಿ ಐಸಿಯುಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. ಶಾಸಕ ಜಮೀರ್ ಅಹಮದ್ ಮತ್ತು ವೈದ್ಯೇಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್ ಉಪಸ್ಥಿತರಿದ್ದರು. pic.twitter.com/YFnTt8SHBr
— Dr Sudhakar K (@mla_sudhakar) February 10, 2021
Advertisement
ಕೆಲ ರಾಜ್ಯಗಳಲ್ಲಿ ಲಸಿಕೆ ಪಡೆಯದಿದ್ದರೆ ಸಂಬಳ ನೀಡುವುದಿಲ್ಲ ಎಂದು ಕೂಡ ಹೇಳಲಾಗಿದೆ. ಆದರೆ ನಮ್ಮಲ್ಲಿ ಆ ರೀತಿಯ ನಿರ್ಬಂಧ ಹೇರಿಲ್ಲ. ಭಾರತದ ಲಸಿಕೆಗೆ 25 ದೇಶಗಳಲ್ಲಿ ಬೇಡಿಕೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಉಚಿತವಾಗಿ ಲಸಿಕೆ ನೀಡುವಾಗ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದರು.
Advertisement
ಕೋವಿಡ್ ಬಂದ ಬಳಿಕ, ಆರೋಗ್ಯ ಇಲ್ಲದಿದ್ದರೆ ಏನೂ ಇಲ್ಲ ಎಂದು ಅರ್ಥವಾಗಿದೆ. ಆದ್ದರಿಂದ ಏಳೆಂಟು ತಿಂಗಳಲ್ಲಿ ರಾಜ್ಯ ಸರ್ಕಾರ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಿದೆ. ಆರೋಗ್ಯ ಇಲಾಖೆಯಡಿ ಸುಮಾರು 3 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳು, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ನಾಲ್ಕೂವರೆ ಸಾವಿರ ಆಕ್ಸಿಜನ್ ಹಾಸಿಗೆ ಇತ್ತು. ಈಗ ಎರಡೂ ಇಲಾಖೆಗಳ ಆಸ್ಪತ್ರೆಗಳು ಸೇರಿ ಒಟ್ಟು 30 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಅಳವಡಿಸಲಾಗಿದೆ. ಈ ಸಾಲಿನ ಬಜೆಟ್ ನಲ್ಲೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
Advertisement
ಕೋವಿಡ್ ಆರಂಭದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಗಣನೀಯ ಸೇವೆ ಸಲ್ಲಿಸಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆದ 200ಕ್ಕೂ ಹೆಚ್ಚು ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಇದಕ್ಕಾಗಿ ವಿಶೇಷ ಅಭಿನಂದನೆಗಳು ಎಂದರು.