ಹಾಸನ: ಸರ್ಕಾರ ಕೊರೊನಾ ಹೆಸರಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಿದೆ ಎಂದು ಹಾಸನದ ಅರಕಲಗೂಡಿನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆರೋಪ ಮಾಡಿದ್ದಾರೆ.
ಅರಕಲಗೂಡು ಪಟ್ಟಣ ಪಂಚಾಯತ್‍ನಲ್ಲಿ ನಡೆದ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಭಾರೀ ಲೂಟಿ ಮಾಡುತ್ತಿದೆ. ಒಂದು ವೆಂಟಿಲೇಟರ್ ಖರೀದಿಗೆ 8.5 ಲಕ್ಷ ಚಾರ್ಜ್ ಮಾಡಿದೆ. ಆದರೆ ನಾನು ಕೇವಲ 2.5 ಲಕ್ಷವನ್ನು ನೀಡಿ ಸಂಸದರ ನಿಧಿಯಿಂದ ಸಕಲೇಶಪುರ ಆಸ್ಪತ್ರೆಗೆ ವೆಂಟಿಲೇಟರ್ ನೀಡಿದ್ದೇನೆ ಎಂದಿದ್ದಾರೆ.
ರಾಜ್ಯ ಸರ್ಕಾರ ವೆಂಟಿಲೇಟರ್ ಹೆಸರಲ್ಲಿ 40 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದೆ. ಸಾರ್ವಜನಿಕರ ಹಣ ದುರುಪಯೋಗ ಆಗುತ್ತಿದ್ದು, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.