ಬೆಂಗಳೂರು: ವೃಷಭಾವತಿ ನದಿಯ ಕೊಳಚೆ ನೀರನ್ನು ಮುಂದಿನ 5 ವರ್ಷಗಳಲ್ಲಿ 1500. ಕೋಟಿ ರೂ.ಗಳ ವೆಚ್ಚದಲ್ಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಕೃಷಿಗೆ ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಸಚಿವ ಯೋಗೇಶ್ವರ್ ಅವರು ಇಂದು ಬೆಳಗ್ಗೆ ಬೆಂಗಳೂರಿನ ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ದೇವಾಲಯದಿಂದ ಬಿಡದಿಯ ಬೈರಮಂಗಲ ಕೆರೆಯವರೆಗೂ ವೃಷಭಾವತಿ ನದಿಯನ್ನು ಪರಿಶೀಲಿಸಿದರು. ಬೆಂಗಳೂರು ಜಲ ಮಂಡಳಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
Advertisement
ಬೆಂಗಳೂರು ನಗರದ ಶೇ.40 ರಷ್ಟು ತ್ಯಾಜ್ಯ ನೀರು ವೃಷಭಾವತಿ ನದಿ ಮೂಲಕ ಬಿಡದಿಯ ಬೈರಮಂಗಲ ಕೆರೆಗೆ ಸೇರುತ್ತಿದೆ. ಪ್ರಸಕ್ತ ಕೇವಲ ಎರಡು ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದ್ದು, ಈ ನೀರು ಕೃಷಿ ಸೇರಿದಂತೆ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ. ಇನ್ನೊಂದೆಡೆ ಸಂಸ್ಕರಣೆ ಮಾಡಿದ ನೀರನ್ನು ಚರಂಡಿಗಳಿಗೆ ಹರಿಸುತ್ತಿದ್ದು, ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ.
Advertisement
ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರದ ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿ ಹರಿಯುವ 1500 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಿ, ಕೆರೆಗಳನ್ನು ತುಂಬಿಸುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸುವುದು ನಮ್ಮ ಉದ್ದೇಶವಾಗಿದೆ. ಒಂದು ಎಂ.ಎಲ್.ಡಿ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಲು 1.00 ಕೋಟಿ ರೂ. ವೆಚ್ಚವಾಗುತ್ತದೆ. 1500 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು 1500 ರೂ. ಕೋಟಿ ವೆಚ್ಚವಾಗಲಿದ್ದು, 3-5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಆನಂತರ ಕುಡಿಯುವುದಕ್ಕೆ ಹೊರತುಪಡಿಸಿ, ಬೇರೆ ಎಲ್ಲಾ ಚಟುವಟಿಕೆಗಳಿಗೆ ಈ ಶುದ್ಧ ನೀರನ್ನು ಬಳಸಬಹುದಾಗಿದೆ ಎಂದು ಸಚಿವರು ಇದೇ ವೇಳೆ ವಿವರಿಸಿದ್ದಾರೆ.
Advertisement
Advertisement
ಬಸವನಗುಡಿಯಲ್ಲಿ ಹುಟ್ಟುವ ವೃಷಭಾವತಿ ನದಿ ಬಿಡದಿಯ ಬೈರಮಂಗಲ ಕೆರೆಗೆ ತಲುಪುತ್ತದೆ. ನಾಯಂಡನಹಳ್ಳಿ ಹಾಗೂ ಮೈಲಸಂಧ್ರದಲ್ಲಿ ಇದಿಗ ಎರಡು ಹಂತಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ 600 ಪ್ರದೇಶದಲ್ಲಿದ್ದು, ಅಲ್ಲಿಯೂ ಸಹ ಒಂದು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸಿಂಡಿಕೇಟ್ ಸದಸ್ಯರಿಗೆ ಈ ಯೋಜನೆಯ ಮಹತ್ವವನ್ನು ವಿವರಿಸಿ, ಅಲ್ಲಿಯೂ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ರಾಜ್ಯ ಸರ್ಕಾರದ ವತಿಯಿಂದ ಸ್ಥಾಪಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಅಂಬರೀಶ್‍ಗೆ ನಾನೇನು ಗುಲಾಮನಾಗಿದ್ನಾ: ಫೋಟೋ ವೈರಲ್‍ಗೆ ಹೆಚ್‍ಡಿಕೆ ಪ್ರಶ್ನೆ
ವೃಷಭಾವತಿ ನದಿಯಲ್ಲಿ ಹರಿಯುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಬಗ್ಗೆ ಕಾರ್ಖಾನೆಗಳು, ಜನವಸತಿ ಪ್ರದೇಶಗಳು ಹಾಗೂ ಅಪಾರ್ಟ್‍ಮೆಂಟ್‍ಗಳಿಂದ ಸಂಸ್ಕರಣೆ ಮಾಡದೇ ನದಿಗೆ ನೇರವಾಗಿ ತ್ಯಾಜ್ಯ ನೀರು ಹರಿಸುತ್ತಿರುವುದರ ವಿರುದ್ಧ ಹಾಗೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇನೆ. ಮುಂದಿನ ವಾರದಲ್ಲಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು ಒಂದು ದೃಢ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
ವೃಷಭಾವತಿ ಹುಟ್ಟುವ ಪ್ರದೇಶದಿಂದ ಅರ್ಕಾವತಿ ನದಿ ತಲುಪುವರೆಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸಿ ಎಂದು ಹೈಕೋರ್ಟ್ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಯೋನ್ಮುಖವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ವೃಷಭಾವತಿ ನಿಧಿ ಪ್ರದೇಶದಲ್ಲಿ 3304 ಕೈಗಾರಿಕೆಗಳಿದ್ದು, 1396 ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡಿ, ನದಿಗೆ ನೇರವಾಗಿ ತ್ಯಾಜ್ಯ ನೀರನ್ನು ಹರಿಸುತ್ತಿವೆ. 1476 ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, 77 ಕಾರ್ಖಾನೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. 275 ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ ಎಂದು ಇದೇ ವೇಳೆ ಸಚಿವರು ವಿವರಿಸಿದರು. ಕೇವಲ ಉದ್ಯಮಿಗಳ ಮೇಲಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಸಹ ದೂರು ದಾಖಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಆದೇಶಿಸಿದರು.
ಬೈರಮಂಗಲ ಕೆರೆ :
ರೂ.250.00 ಕೋಟಿಗಳ ವೆಚ್ಚದಲ್ಲಿ ಬೈರಮಂಗಲ ಕೆರೆಯನ್ನು ಏತ ನೀರಾವರಿ ಯೋಜನೆಯನ್ನು ಅನುಷ್ಟಾನಗೊಳಿಸಲು ಟೆಂಡರ್ ಕರೆಯಲಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದಿಂದ ಹಾಗೂ ಬೆಂಗಳೂರಿನ ವೃಷಭಾವತಿ ನದಿಯಲ್ಲಿ ಹರಿದು ಬರುವ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಬೈರಮಂಗಲ ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರದ ಶೇ.40 ರಷ್ಟು ನೀರು ಈ ಕೆರೆಗೆ ಬರುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಜೊತೆಯಲ್ಲಿ ಮಾತನಾಡಿ ಮಳೆ ನೀರು ಹಾಗೂ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬೇರ್ಪಡಿಸಿ, ಸುತ್ತ-ಮುತ್ತ ಹಳ್ಳಿಗಳಲ್ಲಿರುವ 142 ಕೆರೆಗಳಿಗೆ ನೀರನ್ನು ಹರಿಸಲಾಗುವುದು. ಮುಂದಿನ 1-2 ವರ್ಷಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಾಗಿ ಬೈರಮಂಗಲ ಕೆರೆಯನ್ನು ವೀಕ್ಷಿಸಿದ ನಂತರ ಹೇಳಿದರು.
ಖಂಡನೀಯ: ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ರವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವಾಚ್ಯ ಪದ ಬಳಕೆ ಮಾಡಲಾಗಿದ್ದು, ಖಂಡನೀಯ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್
ಕೆ.ಆರ್.ಎಸ್ ಆಣೆಕಟ್ಟಿನ 30 ಕಿ.ಮೀ ವ್ಯಾಪ್ತಿಯ ಹಲವು ದಶಕಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆಗೆ ಸ್ಪೋಟಕಗಳನ್ನು ಬಳಸುತ್ತಾರೆ. ಇದರಿಂದ ಕೆ.ಆರ್.ಎಸ್ ಗೋಡೆಗೆ ದಕ್ಕೆಯುಂಟಾಗಲಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿಯೂ ಸಹ ಬಂದಿವೆ. ಈ ನಿಟ್ಟಿನಲ್ಲಿ ಸುಮಲತಾರವರು ಕೆ.ಆರ್.ಎಸ್ ಆಣೆಕಟ್ಟು ಬಿರುಕು ಬೀಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ತಮ್ಮ ಬಳಿ ಇರುವ ಮಾಹಿತಿಯನ್ನು ಹೇಳಬೇಕಿತ್ತು. ಅದನ್ನು ಬಿಟ್ಟು ಸುಮಲತಾ ರವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿರುವುದು ಅವರಿಗೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ಅವರನ್ನು ಮಾದ್ಯಮಗಳು ವಿಜೃಂಭಿಸುವುದು ಬೇಡ. ಅವರು ಘನತೆ ಹಾಗೂ ತೂಕವನ್ನು ಕಳೆದುಕೊಂಡಿದ್ದಾರೆ.
ನಾನು ನನ್ನ ಜಿಲ್ಲೆ ರಾಮನಗರದ ಸಮಸ್ಯೆಗಳ ಬಗ್ಗೆ ಮಾತನಾಡಿದ ಮರುದಿನವೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳ ಮನೆಗೆ ಓಡಿ ಹೋಗುತ್ತಾರೆ. ಅದು ನನಗೆ ತಿರುಗುಬಾಣವಾಗುತ್ತಿದೆ. ಕುಮಾರಸ್ವಾಮಿ ರಾಜಕೀಯವಾಗಿ ನೆಲೆ ಕಳೆದುಕೊಂಡಿದ್ದಾರೆ. ರಾಜಕೀಯವಾಗಿ ದಿನೇ-ದಿನೇ ದುರ್ಬಲವಾಗುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಸಹಕಾರವಿಲ್ಲದಿದ್ದರೇ ಜೆ.ಡಿ.ಎಸ್, ಎಂ.ಎಲ್.ಎ ಗಳು ಆ ಪಕ್ಷದಲ್ಲಿ ಇರುತ್ತಿರಲಿಲ್ಲ. ಅವರನ್ನು ಉಳಿಸಿಕೊಳ್ಳಲು ಪದೇ-ಪದೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ. ರಾಮನಗರ, ಮಂಡ್ಯ ಬಿಟ್ಟರೇ ಅವರ ಪಕ್ಷಕ್ಕೆ ಬೇರೆ ಎಲ್ಲೂ ಅಸ್ತಿತ್ವವಿಲ್ಲ. ಉತ್ತರ ಕರ್ನಾಟಕಕ್ಕೆ ಹೋಗಿ ಪಕ್ಷ ಕಟ್ಟಲೀ ನೋಡೋಣ ಎಂದು ಕುಮಾರಸ್ವಾಮಿಗೆ ಯೋಗೇಶ್ವರ್ ತಿರುಗೇಟು ನೀಡಿದ್ದಾರೆ.