ಶಿವಮೊಗ್ಗ: ವೃದ್ಧೆಯೊಬ್ಬರ ಚಿನ್ನದ ಸರ ದೋಚಿದ್ದ ಮೂವರು ಖದೀಮರನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.
ಪವನ (19), ವಿಷ್ಣು (19) ಹಾಗೂ ಮಹೇಶ (19) ಬಂಧಿತ ಆರೋಪಿಗಳಾಗಿದ್ದಾರೆ. ಇದೇ ತಿಂಗಳ 19 ರಂದು ವೃದ್ಧೆ ಲಕ್ಷ್ಮಮ್ಮ (85) ನಗರದ ಅಂಚೆ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಹಿಂಬದಿಯಿಂದ ಬಂದ ಮೂವರು ಅಪರಿಚಿತ ಯುವಕರು ವೃದ್ಧೆಯ ಬಂಗಾರದ ಸರವನ್ನು ಅಪಹರಿಸಿದ್ದರು.
ಈ ಬಗ್ಗೆ ವೃದ್ಧೆ ಲಕ್ಷ್ಮಮ್ಮ ಪೇಪರ್ ಟೌನ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದೇ ದಿನದಲ್ಲಿ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ಈ ಹಿಂದೆ ಪೇಪರ್ ಟೌನ್ ಠಾಣೆಯಲ್ಲಿ ಎರಡು ಕಳ್ಳತನ ಪ್ರಕರಣ ಹಾಗೂ ನ್ಯೂ ಟೌನ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಬಂಧಿತರಿಂದ 4 ಲಕ್ಷದ 63 ಸಾವಿರ ರೂ ಮೌಲ್ಯದ 103 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ 2 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.