– ವಿಶೇಷ ಅಭಿಯಾನದ ಮೂಲಕ ಮನವೊಲಿಸುತ್ತೆವೆಂದ ಸಚಿವರು
ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 5,137 ಜನಸಂಖ್ಯೆ ಇದ್ದು, ಇದುವರೆಗೆ ಗ್ರಾಮ ಪಂಚಾಯತಿ ಸಿಬ್ಬಂದಿ ಹೊರತುಪಡಿಸಿ ಕೇವಲ ಮೂವರು ಮಾತ್ರ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ವದಂತಿಯಿಂದ ಭಯಭೀತರಾಗಿರುವ ಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಅಲ್ಲದೆ ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಸ್ವತಃ ಇಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಗಾಮಿ ಹಾಗೂ ಇತರ ಹತ್ತು ಮಂದಿ ಸದಸ್ಯರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜರೆಡ್ಡಿ ಹಾಗೂ ಅವರ ಪುತ್ರ ಸತೀಶ್ ಹಾಗೂ ಇನ್ನೊಬ್ಬ ವ್ಯಕ್ತಿ ಸೋಮಾಲಿ ಮೂವರು ಮಾತ್ರ ಲಸಿಕೆ ಪಡೆದಿದ್ದಾರೆ. ಗೋಪಿನಾಥಂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗೋಪಿನಾಥಂ, ಪುದೂರು, ಆತೂರು, ಆಲಂಬಾಡಿ, ಕೋಟೆಯೂರು, ಅಪ್ಪುಗಾಂಪಟ್ಟಿ, ಜಂಬೂಟಪಟ್ಟಿ, ಮಾರಿಕೊಟೈ(ಹೊಗೆನಕಲ್) ಗ್ರಾಮಗಳಿದ್ದು, ಈ ಎಲ್ಲ ಗ್ರಾಮಗಳು ಹಿಂದೆ ನರಹಂತಕ ವೀರಪ್ಪನ್ ಕಾರ್ಯಕ್ಷೇತ್ರವಾಗಿದ್ದವು.
ಬಹುತೇಕ ತಮಿಳರೇ ಇರುವ ಈ ಗ್ರಾಮಗಳ ಜನತೆ ತಮಿಳು ಸಿನಿಮಾಗಳ ಕಟ್ಟಾ ಅಭಿಮಾನಿಗಳಾಗಿದ್ದಾರೆ. ಇತ್ತೀಚೆಗೆ ತಮಿಳು ಹಾಸ್ಯನಟ ವಿವೇಕ್, ಕೋವಿಡ್ ಲಸಿಕೆ ಹಾಕಿಸಿಕೊಂಡ ಮರುದಿನ ಮೃತಪಟ್ಟಿದ್ದರು. ಇದು ಕೇವಲ ಕಾಕತಾಳೀಯವಷ್ಟೇ ಆದರೆ ಅವರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರಿಂದ ಸಾವನ್ನಪ್ಪಿದರು ಎಂಬ ಸುಳ್ಳು ಸುದ್ದಿ ಈ ಭಾಗದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದಲ್ಲದೆ ಕೊಳ್ಳೇಗಾಲ ತಾಲೂಕು ಜಾಗೇರಿ ಗ್ರಾಮದಲ್ಲೂ ಹೀಗೆ ಒಬ್ಬರು ಮೃತಪಟ್ಟಿದ್ದಾರೆ ಎಂಬ ಮತ್ತೊಂದು ಸುಳ್ಳು ವದಂತಿ ಹಬ್ಬಿತು. ಇದನ್ನು ಬಲವಾಗಿ ನಂಬಿದ ಜನ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಭಯಪಡುತ್ತಿದ್ದಾರೆ.
ಏಪ್ರಿಲ್ 30ರಂದು ಮಹದೇಶ್ವರಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಈ ಭಾಗದ ಜನರಿಗೆ ಕೋವಿಡ್ ಲಸಿಕೆ ಹಾಕುವ ಸಲುವಾಗಿ ಕ್ಯಾಂಪ್ ಹಾಕಿ ಇಡೀ ದಿನ ಕಾದರೂ ಯಾರೋಬ್ಬರು ಇತ್ತ ಸುಳಿಯಲಿಲ್ಲ. ಸಿಬ್ಬಂದಿ ಕಾದು ಸುಸ್ತಾಗಿ ವಾಪಸ್ ತೆರಳಬೇಕಾಯಿತು.
ಈ ಕುರಿತು ಮಾತನಾಡಿದ ಸಚಿವ ಸುರೇಶ್ ಕುಮಾರ್, ಕಾಡಂಚಿನ ಗ್ರಾಮದಲ್ಲಿ ವ್ಯಾಕ್ಸಿನ್ ಮಾಡಿಸಲು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಯಾರೂ ಸುಳ್ಳು ವದಂತಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಕೋವಿಡ್ ವಿರುದ್ಧ ಹೋರಾಟಕ್ಕೆ ಲಸಿಕೆಯೊಂದೆ ಗುರಾಣಿ. ಆದ್ದರಿಂದ ಲಸಿಕೆ ಹಾಕಲೂ ಕಾಡಂಚಿಂನ ಗ್ರಾಮದಲ್ಲಿ ವಿಶೇಷ ಅಭಿಯಾನ ಮಾಡುವುದಾಗಿ ತಿಳಿಸಿದರು.