ಕೊಪ್ಪಳ: ಇತ್ತೀಚೆಗಷ್ಟೇ ಗವಿ ಮಠದ ವೃದ್ಧಾಶ್ರಮದಲ್ಲಿ 100 ಬೆಡ್ ಗಳ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ತೆರದ ಬೆನ್ನಲ್ಲೇ ಇದೀಗ ಶ್ರೀಗಳು ಸ್ವತಃ ವೀಡಿಯೋ ಕಾಲ್ ಮಾಡಿ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದ್ದಾರೆ.
ನಗರದ ಗವಿ ಮಠದ ವೃದ್ಧಾಶ್ರಮದಲ್ಲಿ 100 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ತೆರಯಲಾಗಿದೆ. ಈ ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಾದ ರೋಗಿಗಳಿಗೆ ವೀಡಿಯೋ ಕಾಲ್ ಮಾಡಿ ಶ್ರೀಗಳು ಮಾತನಾಡಿದ್ದಾರೆ. ಆರೋಗ್ಯ ವಿಚಾರಿಸಿ, ಯಾವುದೇ ರೀತಿಯ ಭಯಪಡದಂತೆ ರೋಗಿಗಳಲ್ಲಿ ಧೈರ್ಯ ತುಂಬಿದ್ದಾರೆ. ಕೋವಿಡ್ ಕೇರ್ ಸೆಂಟರ್ ತೆರೆಯುವುದಲ್ಲದೆ, ಸ್ವತಃ ತಾವೇ ರೋಗಿಗಳಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುವ ಕಾಳಜಿ ತೋರಿದ್ದಾರೆ. ವೀಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ ಶ್ರೀಗಳ ಮಾತಿಗೆ ಸೋಂಕಿತರು ಕೈ ಮುಗಿದಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ಫುಲ್ ಆಗುತ್ತಿದ್ದಂತೆ ಐತಿಹಾಸಿಕ ಗವಿಮಠದಿಂದ 100 ಬೆಡ್ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಗವಿ ಮಠದ ಸ್ವಾಮೀಜಿ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ. ಗವಿಮಠದ ವೃದ್ಧಾಶ್ರಮದಲ್ಲಿ 100 ಬೆಡ್‍ಗಳ ಆಸ್ಪತ್ರೆ ತಲೆ ಎತ್ತಿದ್ದು, ಕೊಪ್ಪಳ ಜಿಲ್ಲಾಡಳಿತದ ಮನವಿ ಹಿನ್ನೆಲೆ ಗವಿಸಿದ್ದೇಶ್ವರ ಸ್ವಾಮೀಜಿ 100 ಬೆಡ್‍ಗಳ ಆಸ್ಪತ್ರೆ ನಿರ್ಮಾಣ ಮಾಡಿಸಿದ್ದಾರೆ.
ಒಟ್ಟು 100 ಹಾಸಿಗೆಯಲ್ಲಿ 70 ಆಕ್ಸಿಜನ್ ಬೆಡ್, 20 ಸಾಮಾನ್ಯ ಬೆಡ್ ಮಾಡಲಾಗಿದ್ದು, ಬಾಕಿ 10 ಬೆಡ್ ನಲ್ಲಿ 6 ಎಚ್‍ಎಫ್‍ಎನ್‍ಸಿ ಬೆಡ್ ಮತ್ತು 4 ವೆಂಟಿಲೇಟರ್ ಬೆಡ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಾಮೀಜಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.