– 5 ಸಾವಿರ ಕಾರ್ಮಿಕರು ಪ್ರಮುಖ ಆರೋಪಿಗಳು
– 300ಕ್ಕೂ ಹೆಚ್ಚು ಮಂದಿ ವಶಕ್ಕೆ
ಕೋಲಾರ : ಐಫೋನ್ ತಯಾರಕಾ ವಿಸ್ಟ್ರಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿನ ದಾಂಧಲೆ ಪ್ರಕರಣ ಸಂಬಂಧ 7 ಸಾವಿರ ಕಾರ್ಮಿಕರ ವಿರುದ್ದ ಆಡಳಿತ ಮಂಡಳಿ ದೂರು ನೀಡಿದೆ.
ಸುಮಾರು 300 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು 149 ಜನರನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಎಚ್.ಡಿ ಕ್ವಾಲಿಟಿ ಇರುವ ಸಿಸಿಟಿವಿ ಕ್ಯಾಮೆರಾ ಮತ್ತು ವಾಟ್ಸಪ್ ಚಾಟ್, ಕರೆಯನ್ನು ಆಧರಿಸಿ ಕೃತ್ಯ ಎಸಗಿದವರನ್ನ ಬಂಧಿಸಲಾಗುತ್ತಿದೆ.
6 ಖಾಸಗಿ ಏಜೆನ್ಸಿಗಳ ಮೂಲಕ 8,490 ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕರು ಹಾಗೂ 1,343 ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ವಿಸ್ಟ್ರಾನ್ ಕಂಪನಿ ನೇಮಿಸಿಕೊಂಡಿತ್ತು. ಈಗಾಗಲೇ ಕಂಪನಿ ಆಡಳಿತ ಮಂಡಳಿ, ಅಸಿಸ್ಟೆಂಟ್ ಮ್ಯಾನೇಜರ್ ವೇಮಗಲ್ ಪೊಲೀಸ್ ಠಾಣೆಯಲ್ಲಿ ಕಾರ್ಮಿಕರ ವಿರುದ್ದ ಪ್ರತ್ಯೇಕ ಮೂರು ಎಫ್‌ಐಅರ್ ದಾಖಲು ಮಾಡಿದ್ದಾರೆ.
ಒಟ್ಟು 7 ಸಾವಿರ ಕಾರ್ಮಿಕರ ವಿರುದ್ದ ದೂರು ನೀಡಿದ್ದು, ಇದರಲ್ಲಿ 5 ಸಾವಿರ ಕಾರ್ಮಿಕರು ಪ್ರಮುಖ ಅರೋಪಿಗಳು ಅಂದರೆ ಎ-1 ಎಂದು, 2 ಸಾವಿರ ಕಾರ್ಮಿಕರು ಎ-2 ಅರೋಪಿಗಳೆಂದು ದೂರು ದಾಖಲಾಗಿದೆ.
ಕಂಪನಿ ಉಪಕರಣ, ವಾಹನ, ಎಲೆಕ್ಟ್ರಾನಿಕ್ ಉಪಕರಣಗಳನ್ನ ಧ್ವಂಸ ಮಾಡಿದ್ದು, ಹತ್ತು ಕೋಟಿಯಷ್ಟು ಎಲೆಕ್ಟ್ರಾನಿಕ್ ಉಪಕರಣಗಳು ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದು, ದಾಂಧಲೆ, ಆಸ್ತಿ ಪಾಸ್ತಿ ನಷ್ಟ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ದರೋಡೆ ಪ್ರಕರಣ ಸೇರಿ, ಐಪಿಸಿ ಸೆಕ್ಷನ್ 143, 147, 148, 149, 323, 395, 448, 435, 427, 504, 506 ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಕಂಪನಿಯಲ್ಲಿ ವೇತನ ನೀಡದ ಹಿನ್ನೆಲೆಯಲ್ಲಿ ಡಿ.10 ರಂದು ಕಾರ್ಮಿಕರು ದಾಂಧಲೆ ನಡೆಸಿ ಕಂಪನಿಯನ್ನ ಧ್ವಂಸ ಮಾಡಿದ್ದರು. ಈ ಸಂಬಂಧ ಇಲ್ಲಿಯವರೆಗೆ 149 ಕಾರ್ಮಿಕರನ್ನ ಪೊಲೀಸರು ಬಂಧಿಸಿದ್ದು, ದಾಂಧಲೆಯಿಂದ 437.70 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ಮಾಹಿತಿ ಕಂಪನಿ ಸಿಬ್ಬಂದಿಯಿಂದ ಸಿಕ್ಕಿದ್ದು, 10 ಪೊಲೀಸ್ ತಂಡಗಳಿಂದ ವಿಚಾರಣೆ ನಡೆಯುತ್ತಿದೆ. ಪ್ರಕರಣ ಈಗ ವಿಚಾರಣೆ ಹಂತದಲ್ಲಿದ್ದು, ದಾಂಧಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.
ಎರಡು ಮೂರು ತಿಂಗಳಲ್ಲಿ ಮತ್ತೆ ಕಂಪನಿ ಆರಂಭವಾಗಲಿದೆ. ಜಿಲ್ಲೆಯ ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರನ್ನ ಶಾಸಕರೊಂದಿಗೆ ಸಭೆ ಕರೆದು ಕಾರ್ಮಿಕರ ಸಮಸ್ಯೆಗಳನ್ನ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ತಿಳಿಸಿದರು.
ವಿಸ್ಟ್ರಾನ್ ಕಂಪನಿ ಕಾರ್ಮಿಕರ ವೇತನ ಪಾವತಿ ಮತ್ತು ಹಾಜರಾತಿ ದಾಖಲೆಪತ್ರ ನಿರ್ವಹಣೆಯಲ್ಲಿ ಉಂಟಾದ ಗೊಂದಲ, ಕಾರ್ಮಿಕರು ಹಾಗೂ ಆಡಳಿತ ವರ್ಗದವರ ನಡುವೆ ಬಾಂಧವ್ಯ ಹದೆಗೆಟ್ಟ ಹಿನ್ನೆಲೆಯಲ್ಲಿ ದಾಂಧಲೆ ನಡೆದಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.