– ಸ್ಥಳೀಯರ ಮೇಲೆ ಅಧಿಕಾರಿಗಳ ಅನುಮಾನ
– ಮಂಗಗಳ ಹಾವಳಿಯಿಂದ ಕೃತ್ಯ ಎಸಗಿರುವ ಶಂಕೆ
ಹೈದರಾಬಾದ್: ಸುಮಾರು 50 ಮಂಗಗಳಿಗೆ ವಿಷವುಣಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಮಹಬೂಬಬಾದ್ ಜಿಲ್ಲೆಯಲ್ಲಿ ನಡೆದಿದೆ.
ವಿಷವುಣಿಸಿ ಬರೋಬ್ಬರಿ 40 ಮಂಗಗಳನ್ನು ಕೊಲೆ ಮಾಡಲಾಗಿದ್ದು, ಮೃತದೇಹಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಎಸೆಯಲಾಗಿದೆ. ಸಾನಿಗಾಪುರಂ ಗ್ರಾಮದ ಸಮೀಪವಿರುವ ಬೆಟ್ಟದ ಮೇಲೆ ಮೃತದೇಹಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Advertisement
Advertisement
ದೇಹಗಳು ಸಂಪೂರ್ಣವಾಗಿ ಕೊಳೆತಿದ್ದರಿಂದ ಮಂಗಗಳ ಮರಣೋತ್ತರ ಪರೀಕ್ಷೆಯನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೆ ವಿಷ ಉಣಿಸಿ ಮಂಗಗಳನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಪರಿಪ್ರಮಾಣದಲ್ಲಿ ಮಂಗಗಳನ್ನು ಏಕೆ ಸಾಯಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.
Advertisement
ವಿಪರೀತ ದುರ್ವಾಸನೆ ಬರುತ್ತಿದ್ದರಿಂದ ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದೆವು. ಬಳಿಕ ಮಂಗಗಳ ಮೃತದೇಹಗಳು ತುಂಬಿರುವ ಚೀಲಗಳು ಪತ್ತೆಯಾದವು ಎಂದು ಸ್ಥಳೀಯರು ವಿವರಿಸಿದ್ದಾರೆ. ಐಪಿಸಿ ಸೆಕ್ಷನ್ 429 (ಪ್ರಾಣಿ ಕೊಲ್ಲುವ ಅಥವಾ ದುರ್ಬಲಗೊಳಿಸುವ ಕೃತ್ಯ) ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11(ಎಲ್) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಕೃತ್ಯ ನಡೆದು ಐದಾರು ದಿನಗಳು ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಹಬುಬಬಾದ್ ಗ್ರಾಮಾಂತರ ಎಸ್‍ಐ ಸಿ.ಎಚ್.ರಮೇಶ್ ಬಾಬು ಅವರು ಈ ಕುರಿತು ಮಾಹಿತಿ ನಿಡಿ, ಇದು ದುರಂತ ಮಾತ್ರವಲ್ಲ ಅಪಾಯಕಾರಿ ಕೃತ್ಯ. ಸೆಕ್ಷನ್ 429(ಪ್ರಾಣಿಗಳ ಕೊಲೆ ಹಾಗೂ ವಿಷವುಣಿಸಿರುವುದು) ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11(ಎಲ್) ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.
ಜಿಲ್ಲಾ ಅರಣ್ಯಾಧಿಕಾರಿ ಪೊಲೋಜು ಕೃಷ್ಣಮಾಚಾರಿ ಮಾತನಾಡಿ, ಮಂಗಗಳ ಹಾವಳಿಯಿಂದ ಬೇಸರಗೊಂಡ ಕೆಲವು ಸ್ಥಳೀಯರ ಮೇಲೆ ನನಗೆ ಅನುಮಾನವಿದೆ. ಈ ಕುರಿತು ಇಲಾಖೆ ತನಿಖೆ ಆರಂಭಿಸಿದ್ದು, ಸುತ್ತಲ ಗ್ರಾಮಗಳಲ್ಲಿ ತನಿಖೆ ನಡೆಸಲಿದೆ. ಇಲಾಖೆ ವತಿಯಿಂದಲೇ ಮಂಗಗಳ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.