ಮುಂಬೈ: ಕುಷ್ಠ ರೋಗಿಗಳಿಗಾಗಿ ಜೀವನವನ್ನೇ ಮುಡಿಪು ಇಟ್ಟಿದ್ದ ಸಾಮಾಜಿಕ ಕಾರ್ಯಕರ್ತ ಡಿ.ಬಾಬಾ ಆಮ್ಟೆ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಷ್ಠ ರೋಗಿಗಳ ಆನಂದವನ ಸಂಸ್ಥೆ ನಡೆಸುತ್ತಿದ್ದ ಡಾ.ಶೀತಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಪುರದಲ್ಲಿರುವ ತಮ್ಮ ನಿವಾಸದಲ್ಲಿ ವಿಷದ ಇಂಜೆಕ್ಷನ್ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮಹಾರೋಗಿ ಸೇವಾ ಸಮಿತಿಯಲ್ಲಿ ಹಗರಣದ ಆರೋಪಗಳು ಕೇಳಿ ಬಂದಿದ್ದವು.
ಮೃತ ಡಾ.ಶೀತಲ್ ಆಮ್ಟೆ ಮಹಾರೋಗಿ ಸೇವಾ ಸಮಿತಿಯ ಸಿಇಓ ಆಗಿದ್ದರು. ಇತ್ತ ಹಲವು ವರ್ಷಗಳಿಂದ ಪತಿ ಮತ್ತು ಕುಟುಂಬದ ಸದಸ್ಯರ ಜೊತೆಗೂಡಿ ಕುಷ್ಠ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಟ್ವಿಟ್ಟರ್ ನಲ್ಲಿ ಪೇಂಟಿಂಗ್ ಚಿತ್ರ ಹಂಚಿಕೊಂಡಿದ್ದ ಶೀತಲ್ ಆಮ್ಟೆ, ಯುದ್ಧ ಮತ್ತು ಶಾಂತಿ ಎಂದು ಬರೆದುಕೊಂಡಿದ್ದರು.
'War and Peace'#acrylic on canvas.
30 inches x 30 inches. pic.twitter.com/yxfFhuv89z
— Dr. Sheetal Amte-Karajgi (@AmteSheetal) November 30, 2020
72 ವರ್ಷಗಳಿಂದ ಚಂದ್ರಪುರ ಜಿಲ್ಲೆಯಲ್ಲಿ ಅನಂದವನ ಸಂಸ್ಥೆ ಮುಖಾಂತರ ಬಾಬಾ ಆಮ್ಟೆ ಕುಟುಂಬ ಕುಷ್ಠ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿದೆ. ಕೆಲ ದಿನಗಳ ಹಿಂದೆ ಆನಂದವನ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಶೀತಲ್ ಆಮ್ಟೆ ಫೇಸ್‍ಬುಕ್ ಲೈವ್ ಬಂದಿದ್ದರು. ಲೈವ್ ನಲ್ಲಿ ಆನಂದವನ ಸಂಸ್ಥೆಗೆ ಸಂಬಂಧಿಸಿದ ಹಲವು ವಿಷಯಗಳನ್ನ ಹಂಚಿಕೊಂಡಿದ್ದರು.
ಈ ವಿಷಯ ವಿವಾದ ಆಗುತ್ತಲೇ ಫೇಸ್‍ಬುಕ್ ನಿಂದ ವೀಡಿಯೋ ಡಿಲೀಟ್ ಮಾಡಿದ್ದರು. ಆಮ್ಟೆ ಕುಟುಂಬ ಶೀತಲ್ ಅವರಿಂದ ಅಂತರ ಕಾಯ್ದುಕೊಂಡಿತ್ತು. ಕೆಲ ವಿಷಯಗಳಲ್ಲಿ ಶೀತಲ್ ಅವರಿಗೆ ತಪ್ಪು ಗ್ರಹಿಕೆಯಾಗಿದೆ ಎಂದು ಆಮ್ಟೆ ಕುಟುಂಬಸ್ಥರು ಹೇಳಿದ್ದರು.