ಚಂಡೀಗಢ: ವಿಷಾಕಾರಿ ಮದ್ಯ ಸೇವನೆಯಿಂದ 86 ಜನ ಪಂಜಾಬ್‍ನಲ್ಲಿ ಮೃತಪಟ್ಟಿದ್ದು, 6 ಜನ ಪೊಲೀಸರು ಮತ್ತು 7 ಜನ ಅಬಕಾರಿ ಇಲಾಖೆ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.
ಈ ವಿಚಾರವಾಗಿ ಮಾತನಾಡಿರುವ ಶಿರೋಮಣಿ ಅಕಾಲಿ ದಳದ ಸುಖ್ಬೀರ್ ಸಿಂಗ್ ಬಾದಲ್, ಈ ಘಟನೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಅವರ ಶಾಸಕರು ಕಾರಣ. ಕಾಂಗ್ರೆಸ್ ನಾಯಕರು ಕೂಡ ಅಕ್ರಮ ಮದ್ಯ ಮಾರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಈ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ದುರಂತವು ಕಾಂಗ್ರೆಸ್ ಪಕ್ಷದ ಮಂತ್ರಿಗಳು ಮತ್ತು ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ ಅತಿರೇಕದ ಅಕ್ರಮ ಮದ್ಯ ವ್ಯಾಪಾರವನ್ನು ಮುಕ್ತವಾಗಿ ನಡೆಸಲು ನೀಡಿದ ಪ್ರೋತ್ಸಾಹದ ಫಲವಾಗಿದೆ. ಇದು ಒಂದು ರೀತಿಯ ಕೊಲೆ. ಈ ಘಟನೆಯಲ್ಲಿ ಮಂತ್ರಿಗಳು ಮತ್ತು ಆಡಳಿತ ಪಕ್ಷದ ಶಾಸಕರು ಸೇರಿದಂತೆ ಎಲ್ಲ ತಪ್ಪಿತಸ್ಥರನ್ನು ಬಂಧಿಸಬೇಕು. ಮುಖ್ಯಮಂತ್ರಿ ಆದೇಶಿಸಿದ ಮ್ಯಾಜಿಸ್ಟೀರಿಯಲ್ ತನಿಖೆಯನ್ನು ರದ್ದುಪಡಿಸಬೇಕು. ಘಟನೆಯ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಸ್ವತಂತ್ರ ತನಿಖೆಗೆ ಮಾಡಬೇಕು ಎಂದು ಸುಖ್ಬೀರ್ ಸಿಂಗ್ ಹೇಳಿದ್ದಾರೆ.
ಆದರೆ ಸುಖ್ಬೀರ್ ಸಿಂಗ್ ಅವರ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಈ ಘಟನೆಯಲ್ಲಿ ರಾಜಕೀಯ ಮಾಡುವುದು ಬೇಡ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈವರೆಗೆ ಘಟನೆಗೆ ಸಂಬಂಧಿಸಿದಂತೆ ಇಪ್ಪತ್ತೈದು ಜನರನ್ನು ಬಂಧಿಸಲಾಗಿದೆ. ಏಳು ಅಬಕಾರಿ ಮತ್ತು ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಹಿಂದೆ ಅಕಾಲಿ ದಳ ಮತ್ತು ಬಿಜೆಪಿ ಪಕ್ಷದ ಆಡಳಿತದಲ್ಲೂ ಇಂತಹ ಪ್ರಕರಣಗಳು ನಡೆದಿವೆ. ಗುರುದಾಸ್‍ಪುರ ಮತ್ತು ಬಟಾಲಾದಲ್ಲಿ 2012 ಮತ್ತು 2016 ರಲ್ಲಿ ಇದೇ ರೀತಿಯ ದುರಂತಗಳು ನಡೆದಿವೆ ಎಂದು ಹೇಳಿದ್ದಾರೆ.
ಕಳೆದ ಬುಧವಾರ ಸಂಜೆಯಿಂದ ಪಂಜಾಬ್‍ನ ತಾರ್ನ್ ತರಣ್ ಜಿಲ್ಲೆಯಿಂದ 63 ಜನರು, ಅಮೃತಸರದಲ್ಲಿ 12 ಮತ್ತು 11 ಜನರು ಗುರುದಾಸ್‍ಪುರದ ಬಟಾಲಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಸಂಜೆ ಮೊದಲ ಸಾವಿನ ಪ್ರಕರಣ ಅಮೃತಸರದ ಮುಚಾಲ್ ಗ್ರಾಮದಲ್ಲಿ ವರದಿಯಾಗಿದೆ. ಶುಕ್ರವಾರ ರಾತ್ರಿಯ ವೇಳೆಗೆ 38 ಜನರು ಸಾವನ್ನಪ್ಪಿದ್ದರು. ಈ ಸಾವಿನ ಸಂಖ್ಯೆ ಶನಿವಾರ ರಾತ್ರಿಯ ವೇಳಗೆ ಮತ್ತೆ ಜಾಸ್ತಿಯಾಗಿ ಈಗ 86ಕ್ಕೆ ಬಂದು ನಿಂತಿದೆ. ಸಾವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಂಭವವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ದಿನಾರ್ ಗುಪ್ತಾ, ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ನಾವು ಹಲವಾರು ದಾಳಿಯನ್ನು ನಡೆಸಿದ್ದೇವೆ. ಶುಕ್ರವಾರವೇ ಎಂಟು ಮಂದಿಯನ್ನು ಬಂಧಿಸಿದ್ದೇವೆ. ಮೂರು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಸುಮಾರು 17 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಈ ವೇಳೆ ಹಲವಾರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿದ್ದೇವೆ. ಕರ್ತವ್ಯ ಲೋಪ ತೋರಿದ ನಮ್ಮ ಇಲಾಖೆಯ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದೇವೆ ಎಂದು ಹೇಳಿದ್ದಾರೆ.