ಉಡುಪಿ: ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು ಕೊಟ್ಟಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ. ಟ್ರಸ್ಟ್ ನೋಂದಣಿಯಾಗಿರುವ ಸಂಸ್ಥೆ. ಟ್ರಸ್ಟ್ ನೊಂದಾವಣೆಗೆ ಅದರದ್ದೇ ಆದ ನೀತಿ ನಿಯಮಗಳಿವೆ. ದೇಣಿಗೆ ಸಂಗ್ರಹ ಮಾಡಲು ಅದರದ್ದೇ ಆದ ಕಾನೂನಿದೆ. ನಮಗೆ ಸಂವಿಧಾನವೇ ಅಧಿಕಾರ ಕೊಟ್ಟಿದೆ, ಪಾರರ್ದಶಕತೆ ಖಂಡಿತವಾಗಿ ಬೇಕೆ ಬೇಕು. ಸಂಶಯಗಳನ್ನು ಮುಂದಿಟ್ಟರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಮುಚ್ಚುಮರೆ ಮಾಡಲು ಯಾವುದೇ ವಿಷಯಗಳು ನಡೆಯುವುದಿಲ್ಲ. ಕಾನೂನಾತ್ಮಕವಾಗಿ ಅದಕ್ಕೆ ಬೇಕಾಗಿರುವಂತ ಪುರಾವೆಗಳನ್ನು ಕೊಡಲು ಸಾಧ್ಯವಿದೆ ಎಂದರು.
ಯಾವುದೇ ಸಂಶಯಗಳನ್ನು ಇಟ್ಟು ಆರೋಪ ಮಾಡುವುದು ಸೂಕ್ತವಲ್ಲ. ರಾಮ ಜನ್ಮಭೂಮಿ ಟ್ರಸ್ಟ್ ನಂತೆ ಅಧಿಕೃತವಾಗಿರುವ ವಿಶ್ವ ಪರಿಷತ್ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡುತ್ತಿದೆ. ವಿಶ್ವ ಹಿಂದೂ ಪರಿಷತ್‍ನ ಕಾರ್ಯರ್ತರಿಗೆ ದೇಣಿಗೆ ಸಂಗ್ರಹದ ಜವಾಬ್ದಾರಿ ನೀಡಲಾಗಿದೆ. ವಿಹಿಂಪನ ಮುಖ್ಯಸ್ಥ ಆಯಾ ಊರಿನಲ್ಲಿ ಸಂಗ್ರಹ ನಿರತರಾಗಿದ್ದಾರೆ. ಹಿರಿಯ, ಮುಂದಾಳುಗಳ ನೇತೃತ್ವದಲ್ಲಿ ಕಾರ್ಯಕರ್ತರು ನಿಧಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ವಿಹಿಂಪ ಪುಂಡು ಪೋಕರಿಗಳ ಸಂಸ್ಥೆಯಲ್ಲ, ಇದು ಅಧಿಕೃತ ಸಂಸ್ಥೆ. ಹಾಗಾಗಿ ಇಂತಹ ಮಾತು ಬಳಸುವುದು ಯುಕ್ತವಲ್ಲ. ಸಂಶಯಕ್ಕೆ ಪರಿಹಾರ ಇದೆ. ಸಂಶಯ ಇದೆ ಎಂದು ಅರೋಪ ಮಾಡಿದರೆ, ಆರೋಪದಲ್ಲಿಯೇ ಮುಗಿಯುತ್ತದೆ. ಆರೋಪಕ್ಕೆ ಪ್ರತ್ಯಾರೋಪ ಸಿಗುತ್ತದೆ, ಪ್ರಶ್ನೆಗೆ ಉತ್ತರ ಸಿಗುವುದಿಲ್ಲ, ಪ್ರಶ್ನೆ ಮಾಡಿದರೆ ಉತ್ತರ ಕೊಡಬಹುದು ಎಂದು ಉಡುಪಿಯಲ್ಲಿ ಪೇಜಾವರ ಶ್ರೀ ಖಡಕ್ ಪ್ರತಿಕ್ರಿಯೆ ನೀಡಿದರು.