ಮುಂಬೈ: ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ 4 ವಿಕೆಟ್ ಪಡೆದರೆ ನೂತನ ದಾಖಲೆ ಮಾಡಲಿದ್ದಾರೆ.
ಡಬ್ಲ್ಯುಟಿಸಿ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಈಗಾಗಲೇ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ 14 ಪಂದ್ಯಗಳಿಂದ 70 ವಿಕೆಟ್ ಕಬಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ದಾಖಲೆಯನ್ನು ಮುರಿಯಲು ಇದೀಗ ರವಿಚಂದ್ರನ್ ಅಶ್ವಿನ್‍ಗೆ ಕೇವಲ 4 ವಿಕೆಟ್‍ಗಳ ಅಗತ್ಯವಿದೆ. ಈಗಾಗಲೇ ಅಶ್ವಿನ್ 13 ಪಂದ್ಯಗಳಿಂದ 67 ವಿಕೆಟ್ ಕಬಳಿಸಿದ್ದಾರೆ. ಇನ್ನು 4 ವಿಕೆಟ್ ಪಡೆದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಇದನ್ನೂ ಓದಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ
ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯುವ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡುವ ಇನ್ನೊಬ್ಬ ಬೌಲರ್ ಟಿಮ್ ಸೌಥಿ 10 ಪಂದ್ಯಗಳಿಂದ 51 ವಿಕೆಟ್ ಪಡೆದಿದ್ದಾರೆ. ಆದರೆ ಅವರಿಗೆ ಈ ದಾಖಲೆ ಬರೆಯಲು ಇನ್ನೂ 20 ವಿಕೆಟ್ ಅವಶ್ಯಕತೆ ಇದೆ ಹಾಗಾಗಿ ಸೌಥಿ ದಾಖಲೆ ನಿರ್ಮಿಸುವುದು ಕಷ್ಟದ ಮಾತಾಗಿದೆ.
ಆದರೆ ಅಶ್ವಿನ್ ಉತ್ತಮ ಅವಕಾಶವಿರುವುದರಿಂದಾಗಿ ಈ ದಾಖಲೆಯ ಒಡೆಯನಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇದೆ. ಆದರೆ ಇಂಗ್ಲೆಂಡ್‍ನಲ್ಲಿ ನಡೆಯುವ ಡಬ್ಲ್ಯುಟಿಸಿ ಫೈನಲ್ ಪಂದ್ಯ ಸೌಥಾಂಪ್ಟನ್ ನಡೆಯಲಿದೆ. ಈ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಭಾರತ ತಂಡ ಕೇವಲ ಓರ್ವ ಸ್ಪಿನ್ ಬೌಲರ್ ನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ತಂಡದಲ್ಲಿ ಈಗಾಗಲೇ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಹಾಗಾಗಿ ಅಶ್ವಿನ್‍ಗೆ ತಂಡದಲ್ಲಿ ಸ್ಥಾನ ಸಿಕ್ಕರೆ ಮಾತ್ರ ಈ ದಾಖಲೆ ನಿರ್ಮಿಸಲು ಅವಕಾಶವಿದೆ.
ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಜೂನ್ 18ರಿಂದ 22 ವರೆಗೆ ಡಬ್ಲ್ಯುಟಿಸಿ ಫೈನಲ್ ಪಂದ್ಯಾಟ ನಡೆಯಲಿದೆ. ಈಗಾಗಲೇ ಬಿಸಿಸಿಐ 20 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಆಟಗಾರರೂ ಕೂಡ ಈಗಾಗಲೇ ಮುಂಬೈನಲ್ಲಿ ಕಠಿಣ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.