– ಸಿದ್ದರಾಮಯ್ಯಗೆ ಚಾಲೆಂಜ್
ಚಾಮರಾಜನಗರ: ಪಕ್ಷವನ್ನ ನಂಬಿ ಬಂದವರಿಗೆ ಬಿ.ಎಸ್ ಯಡಿಯೂರಪ್ಪನವರು ಬೆಂಬಲವನ್ನ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಹೆಚ್ ವಿಶ್ವನಾಥ್ ಹೇಳಿಕೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಹಿರಿಯರಿದ್ದಾರೆ. ಹೈಕೋರ್ಟ್ ಮಧ್ಯಂತರ ತೀರ್ಪು ಅಘಾತವನ್ನ ತಂದಿದೆ. ಹಿರಿಯರು ಕುಳಿತುಕೊಂಡ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಇನ್ನು ವ್ಯವಸ್ಥಿತವಾಗಿ ವಿಶ್ವನಾಥ್ ಅವರನ್ನ ಪಕ್ಷದೊಳಗೆ ಕಡೆಗಣಿಸುತ್ತಿರುವ ವಿಚಾರದ ಬಗ್ಗೆ ಗೊತ್ತಿಲ್ಲ, ಮೇಲ್ಮನವಿ ಸಲ್ಲಿಸುವ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರು ಕುಳಿತು ಚೆರ್ಚೆ ಮಾಡುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಅಪ್ಪ ಚೆಕ್ ಮೂಲಕ, ಮಗ ಆರ್‍ಟಿಜಿಎಸ್ ಮೂಲಕ ಲಂಚ ತಗೋತಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಒಬ್ಬ ಅಡ್ವೊಕೇಟ್. ಚೆಕ್ ಅಥವಾ ಆರ್‍ಟಿಜಿಎಸ್ ಮೂಲಕ ಲಂಚ ತೆಗೆದುಕೊಂಡಿದ್ದರೆ ಮಾಧ್ಯಮಗಳ ಮುಂದೆ ಬಂದು ತೋರಿಸಲಿ. ಸುಮ್ನೆ ಯಾರೋ ರಸ್ತೆಲಿ ಬಂದೋನು ಆರೋಪ ಮಾಡ್ತಾನೆ ಅಂತ ಮುಖಂಡರುಗಳು ಮಾತನಾಡೋದ್ರಲ್ಲಿ ಅರ್ಥ ಇಲ್ಲ. ವಿರೋಧ ಪಕ್ಷಗಳಿಗೆ ಬಿಜೆಪಿ ಬಗ್ಗೆ ಮಾತನಾಡಲು ಏನು ಉಳಿದುಕೊಂಡಿಲ್ಲ. ಅದರಲ್ಲೂ ಕೆಆರ್ ಪೇಟೆ, ಶಿರಾದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡು ಮುಖ ತೋರಿಸಲು ಆಗುತ್ತಿಲ್ಲ. ವಿಪಕ್ಷಗಳು ಚುನಾವಣೆ ಎದುರಿಸುವ ನೈತಿಕ ಸ್ಥೈರ್ಯ ಕಳೆದುಕೊಂಡಿವೆ. ಹತಾಶರಾಗಿ ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಮ್ಮಿಂದಲೇ ಸರ್ಕಾರ ಬಂದ್ರೂ ನಮ್ಮ ಜೊತೆ ನಿಲ್ಲಲಿಲ್ಲ- ಬಿಜೆಪಿ ನಾಯಕರ ವಿರುದ್ಧ ವಿಶ್ವನಾಥ್ ಅಸಮಾಧಾನ
ವಿಶ್ವನಾಥ್‍ಗೆ ಚಾಮುಂಡಿ ತಾಯಿಯ ಶಾಪ ತಟ್ಟಿದೆ ಎಂದ ಸಾ.ರಾ ಮಹೇಶ್ ಹೇಳಿಕೆಕೆ ಪ್ರತಿಕ್ರಿಯಿಸಿ, ಅವರು ಯಾರ್ರಿ ಹೇಳಿದೊಕ್ಕೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅತೀ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದರು. ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ಮುಸುಕಿನ ಗುದ್ದಾಟ ವಿಚಾರದ ಕುರಿತು ಮಾತನಾಡಿದ ವಿಜಯೇಂದ್ರ, ರೇಣುಕಾಚಾರ್ಯ ಹೇಳಿಕೆ ಸರಿಯಾಗಿ ಇದೆ ಎಂದು ಹೇಳುವ ಮೂಲಕ ಮುಸುಕಿನ ಗುದ್ದಾಟವನ್ನ ಒಪ್ಪಿಕೊಂಡರು. ಇದನ್ನೂ ಓದಿ: ಆಣೆ ಪ್ರಮಾಣವಾದ 1 ವರ್ಷಕ್ಕೆ ನ್ಯಾಯದೇವತೆಯಿಂದ ವಿಶ್ವನಾಥ್‌ಗೆ ಶಿಕ್ಷೆ – ಸಾರಾ ಮಹೇಶ್
ವಲಸಿಗರು ಹೇಳುವುದು ಸರಿ ಇದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಶಕ್ತಿ ಯಡಿಯೂರಪ್ಪನವರಿಗೆ ಇದೆ. ಬರುವ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಯಾರನ್ನ ಮಂತ್ರಿ ಮಾಡಬೇಕೆಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಹೇಳುವ ಮೂಲಕ ಸಿ.ಪಿ ಯೋಗೇಶ್ವರ್‍ಗೆ ಮಂತ್ರಿ ಮಾಡುವ ವಿಚಾರಕ್ಕೆ ಉತ್ತರಿಸಿದರು.